ಮಡಿಕೇರಿ: ಲಾಕ್ಡೌನ್ ಆದೇಶದ ನಡುವೆಯೂ ಪ್ರವಾಸಿಗರನ್ನು ಉಳಿಸಿಕೊಂಡಿದ್ದ ರೆಸಾರ್ಟ್ ಒಂದರ ಪರವಾನಗಿಯನ್ನು ರದ್ದುಗೊಳಿಸಿರುವ ಜಿಲ್ಲಾಡಳಿತ ಆ ರೆಸಾರ್ಟ್ನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಪಂಚಾಯಿತಿಗೆ ನಿರ್ದೇಶನ ನೀಡಿದೆ.
ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ರೀತಿಯ ಐಷಾರಾಮಿ ಹೊಟೇಲ್, ಹೊಟೇಲ್ ಕಂ ಲಾಡ್ಜ್, ರೆಸಾರ್ಟ್ ಮತ್ತು ಹೋಂಸ್ಟೇ, ಯಾವುದೇ ರೀತಿಯ ಛತ್ರ ಮತ್ತು ಡಾರ್ಮೆಟರಿ ಹಾಲ್ ಮುಂತಾದವುಗಳಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ತಂಗುವುದನ್ನು ನಿಷೇಸಿ ಜಿಲ್ಲಾಡಳಿತ ಈ ಹಿಂದೆಯೇ ಆದೇಶಿಸಿತ್ತು.
ಆದರೆ ಸುಂಟಿಕೊಪ್ಪ ಹೋಬಳಿಯ 7ನೇ ಹೊಸಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್ನ ಮಾಲಿಕರು ಈ ಆದೇಶವನ್ನು ಉಲ್ಲಂಘಿಸಿ 5 ಜನ ಪ್ರವಾಸಿಗರಿಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಮಾಡಿಕೊಟ್ಟಿದ್ದರೆನ್ನಲಾಗಿದೆ. ಅಲ್ಲದೆ ಈ ಪ್ರವಾಸಿಗರು ಭಾನುವಾರ ಸಮೀಪದ ಚಿಕ್ಲಿಹೊಳೆ ಮುಂತಾದ ಪ್ರದೇಶಗಳಿಗೆ ಪ್ರವಾಸ ಹೊರಟಿದ್ದರೆಂದು ಹೇಳಲಾಗಿದೆ.
ಇದನ್ನು ಗಮನಿಸಿದ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕುಶಾಲನಗರದ ಪೊಲೀಸ್ ವೃತ್ತ ನಿರೀಕ್ಷರು ಹಾಗೂ ಹೊಸಕೋಟೆ ಪಂಚಾಯಿತಿ ಅಭಿವೃದ್ಧಿ ಅಕಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, 5ಮಂದಿ ಪ್ರವಾಸಿಗರು ಜೀಪ್ನಲ್ಲಿ ಕಂಡು ಬಂದಿದ್ದಾರೆ.
ಅವರನ್ನು ವಿಚಾರಿಸಿದಾಗ ತಾವು ಒಂದೇ ಕುಟುಂಬದವರಾಗಿದ್ದು, ಲಾಕ್ಡೌನ್ಗೆ ಮೊದಲೇ ತೊಂಡೂರಿಗೆ ಬಂದಿದ್ದು, ಲಾಕ್ಡೌನ್ ಬಳಿಕ ವಾಪಾಸ್ ಹೋಗಲು ಸಾಧ್ಯವಾಗದೆ ರೆಸಾರ್ಟ್ನಲ್ಲಿಯೇ ತಂಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ರೆಸಾರ್ಟ್ ಮಾಲಕರು ಪ್ರವಾಸಿಗರನ್ನು ಉಳಿಸಿಕೊಂಡಿದ್ದಲ್ಲದೆ, ಈ ಬಗ್ಗೆ ಸ್ಥಳೀಯ ಆಡಳಿತಕ್ಕಾಗಲಿ, ಆರೋಗ್ಯ ಇಲಾಖೆಗಾಗಲಿ ಮಾಹಿತಿ ನೀಡದೆ ಜಿಲ್ಲಾಕಾರಿಗಳು ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿತ್ತು. ಅಲ್ಲದೆ 5 ಮಂದಿ ಪ್ರವಾಸಿಗರ ವಿರುದ್ಧ ಐ.ಪಿ.ಸಿ ಕಲಂ 188 ರಂತೆ ಹಾಗೂ ವಿಕೋಪ ನಿರ್ವಹಣಾ ಕಾಯ್ದೆ-2005 ರ ಸೆಕ್ಷನ್ 51(ಎ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅನಿಯಮ 1993ರ ಪ್ರಕರಣ 70, 156 ಮತ್ತು 232ರಡಿ ತಮಗೆ ದತ್ತವಾದ ಅಕಾರದಂತೆ ತೊಂಡೂರು ಗ್ರಾಮದ ರೆಸಾರ್ಟ್ನ ಪರವಾನಗಿಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿ ಮತ್ತು ಸದರಿ ರೆಸಾರ್ಟ್ನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಆದೇಶಿಸಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿಗಳು ಆದೇಶ ಹೊರಡಿಸಿದ್ದಾರೆ.