ಬೆಂಗಳೂರು: ಗಾಂ ಅನುಯಾಯಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ. ರಾಜಶೇಖರನ್ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
1928ರ ಸೆ.12 ರಂದು ಬೆಂಗಳೂರು ಸಮೀಪದ ಮರಳವಾಡಿಯಲ್ಲಿ ಜನಿಸಿದ ಅವರಿಗೆ 91 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ಸಮಯದಿಂದ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರಾಜಶೇಖರನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆಯೇ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಗ್ರಾಮೀಣ ಆರ್ಥಿಕ ಸಲಹೆಗಾರ
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯ ಕೂಡ ಆದ ರಾಜಶೇಖರನ್ ಅವರು, ಲೋಕಸಭೆ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿ ಉತ್ತಮ ಸಂಸದೀಯ ಪಟು ಎನಿಸಿಕೊಂಡಿದ್ದರು. ಸರ್ಕಾರಕ್ಕೆ ಆಡಳಿತಾತ್ಮಕ ಸಲಹೆಗಳನ್ನೂ ನೀಡುವ ಮೂಲಕ ಗ್ರಾಮೀಣ ಆರ್ಥಿಕ ಸಲಹೆಗಾರರು ಎಂದೇ ಹೆಸರುವಾಸಿಯಾಗಿದ್ದರು.
ಗಣ್ಯರ ಸಂತಾಪ
ಅಷ್ಟೇ ಅಲ್ಲದೆ, 2004ರಲ್ಲಿ ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವರೂ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಆತ್ಮೀಯರನ್ನು ಅಗಲಿದ್ದಾರೆ. ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.