ಗಡಿಯಲ್ಲಿ ವೈರಿಗಳ ಹುಟ್ಟಡಗಿಸಿದ ಭಾರತೀಯ ಸೇನೆ | ಪಾಕ್ 15 ಸೈನಿಕರು, 8 ಉಗ್ರರ ಹತ್ಯೆ ಪಾಕಿಸ್ಥಾನಕ್ಕೆ ತಕ್ಕ ಪ್ರತ್ಯುತ್ತರ

ಶ್ರೀನಗರ: ಕೊರೋನಾ ಸೋಂಕಿನಿಂದ ತತ್ತರಿಸಿಹೋಗಿದ್ದರೂ, ಜಮ್ಮು-ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ಥಾನಕ್ಕೆ ಭಾರತೀಯ ಯೋಧರು ತಕ್ಕ ಪಾಠ ಕಲಿಸಿದ್ದು, ಫಿರಂಗಿ ದಾಳಿ ಮೂಲಕ ವೈರಿರಾಷ್ಟ್ರದ 15 ಯೋಧರು ಹಾಗೂ 8 ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಕೆರಾನ್ ವಲಯದ ದುದ್ನಿಯಾಲ್ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ನೆಲೆಗಳ ಮೇಲೆ ಏಪ್ರಿಲ್ 10ರಂದು ದಾಳಿ ಮಾಡಿದ ಭಾರತೀಯ ಯೋಧರು ಪಾಕಿಸ್ಥಾನದ ಸೈನಿಕರು ಹಾಗೂ ಉಗ್ರರನ್ನು ಸದೆಬಡಿದಿದ್ದಾರೆ.

ಗಡಿಯಲ್ಲಿ ಪಾಕಿಸ್ಥಾನದ ಸೈನಿಕರು ಅಪ್ರಚೋದಿತವಾಗಿ ಗುಂಡಿನ ದಾಳಿ ಮಾಡುತ್ತಿದ್ದರು, ಕದನ ವಿರಾಮ ಉಲ್ಲಂಘಿಸುತ್ತಿದ್ದರು. ಅಲ್ಲದೆ, ಉಗ್ರರು ಸಹ ಪದೇಪದೆ ದಾಳಿ ಮಾಡುತ್ತಿದ್ದು, ನೆರೆರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ನೀಡುವ ದಿಸೆಯಲ್ಲಿ ಫಿರಂಗಿ ದಾಳಿ ಕೈಗೊಳ್ಳಲಾಯಿತು. ಇದು ಪಾಕಿಸ್ಥಾನಕ್ಕೆ ಭಾರತ ನೀಡಿರುವ ಸ್ಪಷ್ಟ ಸಂದೇಶ ಹಾಗೂ ಎಚ್ಚರಿಕೆ ಎಂದು ಸೇನೆಯ ಇಬ್ಬರು ಅಕಾರಿಗಳು ಮಾಹಿತಿ ನೀಡಿದ್ದಾರೆ.

ಕದನ ವಿರಾಮ ಉಲ್ಲಂಘಿಸುವ ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಲು ಏಪ್ರಿಲ್ 5ರಂದು ಕಿಶನ್‍ಗಂಗಾ ನದಿ ತೀರದ ದುದ್ನಿಯಾಲ್‍ನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಐವರು ಉಗ್ರರನ್ನು ಹೊಡೆದುರುಳಿಸಲಾಯಿತು. ಐವರು ಉಗ್ರರಲ್ಲಿ ಮೂವರು ಕಾಶ್ಮೀರದವರಾದರೆ, ಇನ್ನುಳಿದ ಇಬ್ಬರು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯಲ್ಲಿ ತರಬೇತಿ ಪಡೆದವರಾಗಿದ್ದರು ಎಂದು ತಿಳಿಸಿದ್ದಾರೆ.

ಮೈಪರಚಿಕೊಂಡ ಪಾಕಿಸ್ಥಾನ
ಗಡಿಯಲ್ಲಿ ಮಾಡುವ ಉಪಟಳಕ್ಕೆ ಸರಿಯಾಗಿ ಭಾರತೀಯ ಯೋಧರು ಮಾಡಿದ ಭಾರಿ ದಾಳಿಯಿಂದಾಗಿ ಪಾಕಿಸ್ಥಾನ ಮೈಪರಚಿಕೊಂಡಿದೆ. ಅಲ್ಲದೆ, ಭಾರತ ಮಾಡಿದ ದಾಳಿಯನ್ನು ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಗಡಿಯ ಶಾರದಾ, ದುದ್ನಿಯಾಲ್ ಹಾಗೂ ಶಾಹ್‍ಕೋಟ್‍ನಲ್ಲಿ ಭಾರತದ ದಾಳಿ ಮಾಡಿದೆ. ಆದರೆ, ದಾಳಿಯಲ್ಲಿ ಉಗ್ರರು ಸತ್ತಿಲ್ಲ, ನಾಲ್ವರು ನಾಗರಿಕರ ಹತ್ಯೆಯಾಗಿದೆ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದೆ. ಆದಾಗ್ಯೂ, ಪಾಕಿಸ್ಥಾನ ಸಹ ಭಾರತೀಯ ಸೈನಿಕರಿಗೆ ಪ್ರತ್ಯುತ್ತರ ನೀಡಿದೆ ಎಂದು ಹೇಳಿದೆ. ಆದರೆ ಆ ಕುರಿತು ಯಾವುದೇ ಪುರಾವೆಯಿಲ್ಲ.

ಪಾಕ್ ಪರಚಾಟ ಅಲ್ಲಗಳೆದ ಗುಪ್ತಚರ ಇಲಾಖೆ
ಅತ್ತ, ಭಾರತದ ದಾಳಿಯಲ್ಲಿ ಪಾಕಿಸ್ಥಾನದ ನಾಗರಿಕರು ಮೃತಪಟ್ಟಿರುವುದು ಹಾಗೂ ಪಾಕಿಸ್ಥಾನ ದಾಳಿ ಮಾಡಿರುವುದನ್ನು ಭಾರತದ ಗುಪ್ತಚರ ಇಲಾಖೆ ಅಲ್ಲಗಳೆದಿದ್ದು, ಭಾರತವೇ ಪಾಕ್‍ನ ಸೈನಿಕರು ಹಾಗೂ ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

ಪಾಕ್ ದಾಳಿ, ಮೂವರ ಸಾವು
ಭಾರತೀಯ ಯೋಧರು ಗಡಿಯಲ್ಲಿ ಪಾಕಿಸ್ಥಾನದ ಉಗ್ರರು ಹಾಗೂ ಸೈನಿಕರನ್ನು ಹತ್ಯೆ ಮಾಡಿದರೂ ಬುದ್ಧಿ ಕಲಿಯದ ಪಾಕಿಸ್ಥಾನಿ ಸೈನಿಕರು ಶನಿವಾರ ರಾತ್ರಿ ಹಾಗೂ ಭಾನುವಾರ ಮಧ್ಯಾಹ್ನ, ಸಂಜೆ ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ದಾಳಿ ಮಾಡಿದ್ದು, ಕೆರಾನ್ ವಲಯದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಭಾರತೀಯ ಯೋಧರು ಸಹ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ