ಹೊಸದಿಲ್ಲಿ : ಕೊರೋನಾ ಹರಡುವಿಕೆ ತಡೆಯಲು ಘೋಷಿಸಲಾಗಿರುವ ಲಾಕ್ಡೌನ್ನಿಂದ ಮೀನುಗಾರಿಕೆ ಹಾಗೂ ಜಲಚರ ಸಾಕಣೆ ಉದ್ಯಮ ಚಟುವಟಿಕೆಗಳಿಗೆ ಶನಿವಾರ ಕೇಂದ್ರ ಗೃಹ ಸಚಿವಾಲಯ ವಿನಾಯಿತಿ ನೀಡಿದೆ.
ಮಾರ್ಚ್ 24ರ ಆದೇಶ ಇದಾಗಿದ್ದು, ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಆದೇಶ ಪಾಲಿಸುವಂತೆ ಸಚಿವಾಲಯ ಅಸೂಚನೆ ಹೊರಡಿಸಿದೆ.
ಜಲಚರ ಆಹಾರ ಮತ್ತು ನಿರ್ವಹಣೆ, ಖರೀದಿ ಹಾಗೂ ಮಾರಾಟ ಸೇರಿ ಎಲ್ಲ ಮೀನುಗಾರಿಕೆ ಹಾಗೂ ಜಲಚರ ಉದ್ಯಮಕ್ಕೆ ಸಂಬಂಸಿದ ಚಟುವಟಿಕೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ.
ಆದರೆ ಈ ಚಟುವಟಿಕೆಗಳನ್ನು ನಿರ್ವಹಿಸುವಾಗ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಯ ಕ್ರಮಗಳನ್ನು ಪಾಲಿಸುವುದು ಅತ್ಯವಶ್ಯಕ ಎಂದೂ ಎಚ್ಚರಿಕೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಎಲ್ಲ ನಿಯಮಾವಳಿ ಹಾಗೂ ಸೂಚನೆಗಳ ಪಾಲಿಸುವುದು ಪ್ರತಿಯೊಂದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ. ಈ ಆದೇಶಗಳನ್ನು ಜಾರಿಗೊಳಿಸುವ ಹಾಗೂ ಇದನ್ನು ಸಂಸ್ಥೆಗಳು ಸರಿಯಾಗಿ ಪಾಲಿಸುತ್ತಿವೆಯೇ ಎಂಬುದನ್ನು ನೋಡಿಕೊಳ್ಳುವುದು ಜಿಲ್ಲಾಡಳಿತ ಅಕಾರಿಗಳ ಕೆಲಸ ಎಂದು ಸಚಿವಾಲಯ ಹೇಳಿದೆ.
ಇನ್ನು ಮುಂಬರುತ್ತಿರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಯಾವುದೇ ಕಾರಣಕ್ಕೂ ಧಾರ್ಮಿಕ ಗುಂಪು ಸೇರುವಿಕೆ ನಡೆಯಲು ಬಿಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಅಗತ್ಯ ಆಹಾರ ಪದಾರ್ಥ, ಸೇವೆ, ಬ್ಯಾಂಕ್, ಪೊಲೀಸರು, ಮಾಧ್ಯಮಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ.