ಹೊಸದಿಲ್ಲಿ: ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಮಹಿಳೆಯರ ಜನಧನ್ ಖಾತೆಗೆ ೫೦೦ ರೂ. ನೇರ ವರ್ಗಾವಣೆ ಮಾಡಿದ್ದು, ಈಗ ಮತ್ತೆ ಎರಡು ಕಂತುಗಳಲ್ಲಿ ೧ ಸಾವಿರ ರೂ. ಜಮೆ ಮಾಡುವುದಾಗಿ ಹೇಳಿದೆ.
ಫಲಾನುಭವಿಗಳು ಈ ಸಂಬಂಧ ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯ, ಈಗಾಗಲೇ ಏಪ್ರಿಲ್ ತಿಂಗಳಲ್ಲಿ ೫೦೦ ರೂ.ಗಳನ್ನು ಮಹಿಳೆಯರ ಜನಧನ್ ಖಾತೆಗೆ ಜಮೆ ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮತ್ತೆ ೧ ಸಾವಿರ ರೂ. ಸಮಾನ ಕಂತುಗಳಲ್ಲಿ ಜಮೆ ಮಾಡುವುದಾಗಿ ಗುರುವಾರ ತಿಳಿಸಿದೆ.
ಜನಧನ್ ಖಾತೆಗೆ ಜಮೆಯಾದ ಹಣ ವಿಥ್‌ಡ್ರಾ ಮಾಡದಿದ್ದರೆ ಆ ಹಣವನ್ನು ಸರ್ಕಾರ ಮತ್ತೆ ವಾಪಸ್ ಪಡೆಯಲಿದೆ ಎಂಬ ವದಂತಿಗಳನ್ನು ನಂಬದಂತೆ ಗ್ರಾಹಕರಿಗೆ ಹೇಳಿ ಎಂದು ಅತಿ ಹೆಚ್ಚು ಜನಧನ್ ಖಾತೆ ಹೊಂದಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸರ್ಕಾರ ಸೂಚಿಸಿದೆ.
ವಿಥ್ ಡ್ರಾ ಮಾಡದಿದ್ದರೆ ಸರ್ಕಾರ ಹಣ ವಾಪಸ್ ಪಡೆಯುತ್ತದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಜನ ಲಾಕ್‌ಡೌನ್ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬ್ಯಾಂಕ್‌ಗಳ ಮುಂದೆ ಸರತಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಜನಧನ್ ಖಾತೆಗೆ ಜಮೆ ಮಾಡಿದ ಹಣವನ್ನು ಸರ್ಕಾರ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಹಣಕಾಸು ಇಲಾಖೆ ಮೂಲಕ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.