ಬೆಂಗಳೂರು, ಏ.8- ಜನರಿಲ್ಲದೆ ವೃದ್ಧಾಶ್ರಮಗಳಂತಾಗಿದ್ದ ರಾಜ್ಯದ ಬಹುತೇಕ ಹಳ್ಳಿಗಳು ಈಗ ತುಂಬಿ ತುಳುಕುತ್ತಿವೆ. 30 ರಾಜ್ಯಗಳ ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿದರೆ 20 ಸಾವಿರಕ್ಕೂ ಹೆಚ್ಚು ಹಳ್ಳಿಗಳ ಮನೆಗಳು ಜನರಿಂದ ತುಂಬಿವೆ. ಗ್ರಾಮಗಳ ಬಹುತೇಕ ಮನೆಗಳು ಸೈಬರ್ ಕೆಫೆಗಳಾಗಿ ಪರಿವರ್ತನೆಗೊಂಡಿವೆ.
ಬದುಕಿಗಾಗಿ ಪಟ್ಟಣ ಸೇರಿದವರು ಅದೆಷ್ಟೋ ಮಂದಿ. ಓದಿ ನಗರ, ಪಟ್ಟಣ ಪ್ರದೇಶಗಳಲ್ಲಿ ನೌಕರಿ ಹಿಡಿದವರು ಸಾಕಷ್ಟು ಮಂದಿ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನೆಲೆಸಿದ್ದ ಗ್ರಾಮೀಣ ಜನರು ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸುತ್ತಿದ್ದಂತೆ ತಮ್ಮ ತಮ್ಮ ಗ್ರಾಮಗಳಿಗೆ ಹಿಂದಿರುಗಿದ ಪರಿಣಾಮ ಬಹುತೇಕ ಹಳ್ಳಿಗಳಲ್ಲಿ ಹಳೆಯ ವೈಭವ ಮರುಕಳುಹಿಸಿದೆ.
ನಿರ್ಬಂಧದ ಹಿನ್ನೆಲೆಯಲ್ಲಿ ಊರು ತಲುಪಲಾಗದ ಇನ್ನೂ ಕೆಲವರು ನಗರಗಳಲ್ಲಿ ತೊಳಲಾಡುತ್ತಿದ್ದಾರೆ. ಊರು ಸೇರಿದಂತವರು ಪೋಷಕರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.
ದುಡಿಮೆ ಮಾಡಲೆಂದು ವಯಸ್ಸಾದ ತಂದೆ-ತಾಯಿ, ಅಜ್ಜ-ಅಜಿ ಅಂತಹವರನ್ನು ಹಳ್ಳಿಯಲ್ಲಿ ಬಿಟ್ಟು ಪಟ್ಟಣ ಸೇರಿದ್ದರು. ಬಹುತೇಕ ಹಳ್ಳಿಗಳು ಯುವಕರು, ವಿದ್ಯಾವಂತರು ಇಲ್ಲದೆ ಬಿಕೋ ಎನ್ನುತ್ತಿದ್ದವು. ಯಾವುದಾದರೂ ಜಾತ್ರೆ, ಸಮಾರಂಭ, ಊರ ಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಮಾತ್ರ ನಗರದಲ್ಲಿ ವಾಸಿಸುತ್ತಿದ್ದವರು ಹಳ್ಳಿಗಳಿಗೆ ಬರುತ್ತಿದ್ದರು. ಆದರೆ, ಕೊರೊನಾ ಎಫೆಕ್ಟ್ನಿಂದ ಬಹುತೇಕರು ಈಗ ಹಳ್ಳಿಗಳಿಗೆ ಹಿಂದಿರುಗಿರುವುದರಿಂದ ಎಲ್ಲಾ ಹಳ್ಳಿಗಳು ಈಗ ಭರ್ತಿಯಾಗಿವೆ. ಒಂದೊಂದು ಮನೆಯಲ್ಲಿ 10ರಿಂದ 20 ಮಂದಿಯಿದ್ದಾರೆ. ವಿಭಕ್ತ ಕುಟುಂಬಗಳು ಮತ್ತೆ ಅವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗಿವೆ.
ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳು ಎಲ್ಲಾ ಒಂದೆಡೆ ಸೇರಿ ಸಂಭ್ರಮದಿಂದ ಲಾಕ್ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಇದರೊಂದಿಗೆ ಏನಾಗುತ್ತೋ ಏನೋ ಎಂಬ ಆತಂಕವೂ ಕಾಡುತ್ತಿದೆ. ಯಾವಾಗ ಈ ಅವಧಿ ಮುಗಿಯುತ್ತೇ. ಮತ್ತೆ ಯಾವಾಗ ದುಡಿಮೆಗೆ ಹೋಗುತ್ತೇವೋ ಎಂಬ ಕಳವಳವೂ ಕೂಡ ಕಾಡ ತೊಡಗಿದೆ.
ಸೈಬರ್ ಕೆಫೆಗಳಾದ ಮನೆಗಳು:
ಸಾಫ್ಟ್ವೇರ್ ಎಂಜಿನಿಯರ್ಸ್, ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವವರು, ಅಕೌಂಟ್ಸ್ ವಿಭಾಗ, ಮಾಧ್ಯಮಗಳು ಸೇರಿದಂತೆ ವಿವಿಧ ಕಂಪೆನಿಗಳವರು ಕೊರೊನಾ ಹಿನ್ನೆಲೆಯಲ್ಲಿ ತಮ್ಮ ನೌಕರರಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಿರುವುದರಿಂದ ಬಹುತೇಕ ನೌಕರರು ತಮ್ಮ ಊರುಗಳಿಗೆ ತೆರಳಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
ಒಂದೊಂದು ಮನೆಯಲ್ಲಿ ಐದಾರು ಮಂದಿ ನೌಕರರು ಕೆಲಸ ಮಾಡುತ್ತಿರುವ ಪರಿಣಾಮ ಮನೆಗಳು ಸೈಬರ್ ಕೆಫೆಗಳಂತಾಗಿವೆ. ಗಂಡ- ಹೆಂಡತಿ, ಮಗ-ಸೊಸೆ, ಮಕ್ಕಳು, ಸಂಬಂಧಿಕರು ಒಂದೊಂದು ಮನೆಯಲ್ಲಿ 8-10 ಮಂದಿ ಕಂಪ್ಯೂಟರ್, ಲ್ಯಾಪ್ಟಾಪ್ ಹಿಡಿದು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ ದೃಶ್ಯ ಹಲವು ಹಳ್ಳಿಗಳಲ್ಲಿ ಕಂಡು ಬರುತ್ತಿದೆ.
ತಮ್ಮ ಮಕ್ಕಳು ಬೆಂಗಳೂರಿನಲ್ಲಿ ಇದ್ದಾರೆ, ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ ಎಂದು ಪೋಷಕರು ಹೇಳಿಕೊಳ್ಳುತ್ತಿದ್ದರು. ಈಗ ಬಹುತೇಕ ಅವರೆಲ್ಲಾ ಲ್ಯಾಪ್ಟಾಪ್ ಹಿಡಿದು ತಮ್ಮ ಹಿರಿಯರೆದುರೇ ಕೆಲಸ ನಿರ್ವಹಿಸುತ್ತಿದ್ದಾರೆ.
ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಬಂದೋಗುತ್ತಿದ್ದ ಇವರು ಈಗ ಕಳೆದ 15 ದಿನಗಳಿಂದ ಮನೆಯಲ್ಲೇ ಇದ್ದು ಕೆಲಸ ಮಾಡುತ್ತಿರುವುದಲ್ಲದೆ ತಮ್ಮ ತಂದೆ-ತಾಯಿಗಳು ಹಾಗೂ ಸಂಬಂಧಿಕರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಕೊರೊನಾ ದೇಶಾದ್ಯಂತ ಕಂಟಕ ಸೃಷ್ಟಿಸುತ್ತಿದ್ದರೂ ಕರುಳ ಸಂಬಂಧವನ್ನು ಹತ್ತಿರ ಮಾಡಿದೆ. ಲಾಕ್ಡೌನ್ ಯಾವಾಗ ತೆರವಾಗುತ್ತದೆಯೋ ನಮ್ಮ ಉದ್ಯೋಗ ಏನಾಗುತ್ತದೆಯೋ ಎಂಬ ಆತಂಕವೂ ಕೂಡ ಈ ವರ್ಗದಲ್ಲಿ ಕಾಡ ತೊಡಗಿದೆ. ಏನಾದರಾಗಲಿ ನಮ್ಮ ಮಕ್ಕಳು ನಮ್ಮೆದುರು ಸುರಕ್ಷಿತವಾಗಿದ್ದಾರೆ ಎಂದು ಪೋಷಕರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಪಿಜಿಯಂತಾದ ಕುಟುಂಬ:
ಮನೆಗಳಲ್ಲಿದ್ದವರು, ಹೊರಗಿನಿಂದ ಬಂದವರು, ಸ್ನೇಹಿತರು ಸೇರಿದಂತೆ 15ರಿಂದ 20 ಮಂದಿ ಕೆಲ ಕುಟುಂಬಗಳಲ್ಲಿ ಇದ್ದಾರೆ. ಪ್ರತಿ ದಿನ ಅವರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಇದು ಒಂದು ರೀತಿ ಪಿಜಿಯಂತೆ ಬಹುತೇಕ ಮನೆಗಳು ಮಾರ್ಪಾಟಾಗಿವೆ.
ಕಟ್ಟುನಿಟ್ಟಿನ ನಿರ್ಬಂಧ:
ಹಳ್ಳಿಗಳಿಗೆ ತೆರಳಿದ್ದೇವೆ. ನಮ್ಮ ಊರು, ಮನೆಗಳಲ್ಲಿ ನಾವಿದ್ದೇವೆ ಎಂದುಕೊಂಡು ಹೇಗೆ ಬೇಕೋ ಹಾಗೆ ಇರುವಂತಿಲ್ಲ. ಲಾಕ್ಡೌನ್ ಆದೇಶವನ್ನು ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಯಾರೂ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲಾಗಿದೆ. ಹೊರಗಿನಿಂದ ಬಂದವರ ಮೇಲೆ ತೀವ್ರ ನಿಗಾ ಕೂಡ ವಹಿಸಲಾಗುತ್ತಿದೆ.
ವಿಶೇಷವಾಗಿ ಬೆಂಗಳೂರು ಮತ್ತಿತರ ನಗರಗಳಿಂದ ಹಿಂದುಗಿದವರ ಆರೋಗ್ಯವನ್ನು ಪ್ರತಿ ದಿನ ಸ್ಥಳೀಯ ಆರೋಗ್ಯ ಹಾಗೂ ಪೊಲೀಸ ಸಿಬ್ಬಂದಿಗಳು ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ.