ಕೊರೊನಾ ವೈರಸ್ ಪ್ರಭಾವದಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ

ಬೆಂಗಳೂರು, ಏ.8- ಕೊರೊನಾ ವೈರಸ್ ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ.

ರೆಡ್‍ಕ್ರಾಸ್ ರಕ್ತ ನಿಧಿಯಿಂದ ಮಾಸಿಕ 3,500 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಇದೀಗ ರಕ್ತ ಸಂಗ್ರಹ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಬೆಂಗಳೂರು ರಕ್ತ ನಿಧಿಯಲ್ಲಿ ಕೇವಲ 50 ರಕ್ತದ ಯೂನಿಟ್‍ಗಳು ಮಾತ್ರವೇ ಉಳಿದಿವೆ.
ರಕ್ತ ನಿಧಿಗೆ ಪ್ರತಿದಿನ 100 ಯೂನಿಟï ಗೂ ಹೆಚ್ಚು ರಕ್ತಕ್ಕೆ ಬೇಡಿಕೆ ಬರುತ್ತಿದೆ. ರಕ್ತ ಹೀನತೆ, ಗರ್ಭೀಣಿ ಮಹಿಳೆಯರಿಗೆ, ತಲಸ್ಸೇಮಿಯಾ, ಸಿಕಲ್‍ಸೆಲ್, ಅನಿಮಿಯಾ, ಡಯಾಲಿಸಸ್ ರೋಗಿಗಳು, ಕ್ಯಾನ್ಸರ್, ತುರ್ತು ಶಸ್ತ್ರ ಚಿಕಿತ್ಸೆ, ಇತರೆ ರೋಗಿಗಳಿಗೆ ಮಾಸಿಕ ಐದು ಸಾವಿರ ಯೂನಿಟ್‍ಗಿಂತ ಹೆಚ್ಚು ರಕ್ತದ ಅಗತ್ಯವಿದೆ.

ಆದರೆ ರಕ್ತಕ್ಕೆ ಯಾವುದೇ ಪರ್ಯಾಯ ಇಲ್ಲ. ಬೇಡಿಕೆ ಈಡೇರಿಸಲು ದಾನಿಗಳಿಂದ ಮಾತ್ರ ಸಾಧ್ಯ. ಹೀಗಾಗಿ ಈ ಕೊರತೆ ನೀಗಿಸಲು ರಕ್ತದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ಸಭಾಪತಿ ಎಸ್. ನಾಗಣ್ಣ ಮನವಿ ಮಾಡಿದ್ದಾರೆ.

ಕೋವಿಡ್19 ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ನ್ಯಾಷನಲ್ ಬ್ಲಡ್ ಟ್ರಾನ್ಸ್ ಪ್ಯೂಷನ್ ಕೌನ್ಸಿಲ್ ಎನ್.ಬಿ.ಟಿ.ಸಿ ಮಾರ್ಗದರ್ಶಿ ಸೂತ್ರ ನೀಡಿದ್ದು, ರಕ್ತ ಸಂಗ್ರಹಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಆರೋಗ್ಯವಂತ ರಕ್ತ ದಾನಿಗಳಿಂದ ರಕ್ತ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ದೇಶ ಕೊರೋನಾ ವೈರಸ್ ನಂತಹ ಸಮಸ್ಯೆ ಎದುರಿಸುತ್ತಿರುವಾಗ ಜೀವ ಉಳಿಸಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಇಚ್ಚಿಸುವ ದಾನಿಗಳು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿ, ನಂ 26, ರೆಡ್‍ಕ್ರಾಸ್ ಭವನ, ಮೊದಲನೇ ಮಹಡಿ, ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುವವರಿಗೆ ಪಾಸ್ ವಿತರಿಸಲಾಗುವುದು. 20 ಮಂದಿಗಿಂತ ಹೆಚ್ಚು ಜನ ರಕ್ತದಾನ ಶಿಬಿರ ಆಯೋಜಿಸಲು ಇಚ್ಚಿಸಿದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಎಸ್.ನಾಗಣ್ಣ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22268435/9902859859/9980537678 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ