ಬೆಂಗಳೂರು, ಏ.8- ಕೇವಲ ಅರ್ಧ ಲೀಟರ್ ಉಚಿತ ಹಾಲಿಗಾಗಿ ಕೊರೊನಾ ಭೀತಿಯನ್ನು ಮರೆತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಿಲೋ ಮೀಟರ್ಗಟ್ಟಲೆ ಜನ ಸರದಿ ಸಾಲಿನಲ್ಲಿ ನಿಂತ ಘಟನೆ ಲಗ್ಗೆರೆಯಲ್ಲಿ ವರದಿಯಾಗಿದೆ.
ಸರ್ಕಾರ ಹಂಚಿಕೆಯಾಗದೆ ಉಳಿದ ಹೆಚ್ಚುವರಿ ಹಾಲನ್ನು ಬಡವರಿಗೆ ಉಚಿತವಾಗಿ ಹಂಚಿಕೆ ಮಾಡುವಂತೆ ಸೂಚನೆ ನೀಡಿದೆ. ಇದರಂತೆ ಆಯಾ ಪ್ರದೇಶಗಳಲ್ಲಿ ಜನರಿಗೆ ಉಚಿತ ಹಾಲು ಹಂಚಿಕೆ ಮಾಡಲಾಗುತ್ತಿದೆ.
ಕೇವಲ ಅರ್ಧ ಲೀಟರ್ ಉಚಿತ ಹಾಲಿಗಾಗಿ ಲಗ್ಗೆರೆಯಲ್ಲಿ ಸಾವಿರಾರು ಜನರು ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರವನ್ನು ಮರೆತಿರುವುದು ವಿಪರ್ಯಾಸವೇ ಸರಿ.
ಬೆಳ್ಳಂಬೆಳಗ್ಗೆ ಹಾಲಿಗಾಗಿ ಕಿಲೋಮೀಟರ್ಗಟ್ಟಲೆ ಜನ ಸರದಿ ಸಾಲಿನಲ್ಲಿ ನಿಂತಿರುವ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಸಾಮಾಜಿಕ ಅಂತರ ಕಾಪಾಡದೆ ಕೊರೊನಾ ವೈರಸ್ಅನ್ನು ಮನೆಗೆ ಕರೆದುಕೊಂಡು ಹೋಗಬೇಡಿ. ಮೊದಲು ಮನೆಗಳಿಗೆ ತೆರಳಿ ಎಂದು ತಿಳಿ ಹೇಳಿದರೂ ಜನ ಜಪ್ಪಯ್ಯ ಎಂದರೂ ಸ್ಥಳದಿಂದ ಕದಲಲಿಲ್ಲ.
ಕೊನೆಗೆ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಅರ್ಧ ಲೀಟರ್ ಹಾಲಿಗೆ ಮನೆಯ ಒಬ್ಬ ಸದಸ್ಯ ಬಂದಿದ್ದರೆ ಇಂತಹ ಪರಿಸ್ಥಿತಿ ತಲೆದೋರುತ್ತಿರಲಿಲ್ಲ. ಅತಿಯಾಸೆಯಿಂದ ಜನರು ಮನೆ ಮಂದಿಯನ್ನೆಲ್ಲ ಕರೆದುಕೊಂಡು ಬಂದು ಹಾಲಿಗಾಗಿ ಸಾಲಿನಲ್ಲಿ ನಿಂತಿದ್ದರಿಂದ ಇಂತಹ ಘಟನೆ ಜರುಗಿದೆ.
ಒಂದು ಕಡೆ ಉಚಿತ ಹಾಲಿಗಾಗಿ ಜನ ಕಿಲೋಮೀಟರ್ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರೆ, ಮತ್ತೊಂದು ಕಡೆ ಬಿಬಿಎಂಪಿ ಸದಸ್ಯರು ಮತ್ತು ಶಾಸಕರ ಬೆಂಬಲಿಗರು ಉಚಿತ ಹಾಲನ್ನು ತಾವೇ ಪಡೆದು ತಮ್ಮ ವಾರ್ಡ್ಗಳಲ್ಲಿ ತಮಗೆ ಬೇಕಾದವರಿಗೆ ಹಾಲು ಹಂಚಿಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಹಾಲು ಹಂಚಿಕೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅವರ ಬೆಂಬಲಿಗರ ಹಸ್ತಕ್ಷೇಪವನ್ನು ಮನಗಂಡಿರುವ ಆಯಾ ವಲಯಗಳ ಜಂಟಿ ಆಯುಕ್ತರು ವಾರ್ಡ್ ನೋಡಲ್ ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರೇ ದುರುಪಯೋಗಪಡಿಸಿಕೊಳ್ಳುವುದು ಒಂದು ಕಡೆಯಾದರೆ ಅದನ್ನೇ ಬಂಡವಾಳ ಮಾಡಿಕೊಳ್ಳುವ ರಾಜಕಾರಣಿಗಳ ವೈಖರಿ ನಾಚಿಕೆ ತರಿಸುವಂತಾಗಿದೆ.