ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ

ಬೆಂಗಳೂರು, ಏ.8- ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಏ.14ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿತ್ತು. ಇನ್ನೂ ಲಾಕ್‍ಡೌನ್ ಮುಂದುವರೆದರೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಲಿದೆ.

ಕಟ್ಟಡ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ.ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಇದುವರೆಗೆ ಶೇ.42ರಷ್ಟು ವಲಸಿಗ ಕಟ್ಟಡ ಕಾರ್ಮಿಕರಿಗೆ ಪಡಿತರ ಸಿಕ್ಕಿಲ್ಲ.

ಮಾ.24ರಂದು ಲೇಬರ್ ಆಂಡ್ ಎಂಪ್ಲಾಯ್‍ಮೆಂಟ್ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಅಲ್ಲಿಂದ ಕಾರ್ಮಿಕರು ಹಣವನ್ನು ಪಡೆಯಬೇಕು ಎಂದು ನಿರ್ದೇಶನ ನೀಡಿತ್ತು.

ಆದರೆ, ಶೇ.94ರಷ್ಟು ಮಂದಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ಹೊಂದಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.

ಪಡಿತರವನ್ನು ವಿತರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಅದರಲ್ಲಿ ಶೇ.55ರಷ್ಟು ಮಂದಿ ಕಾರ್ಮಿಕರು ದಿನಕ್ಕೆ 200 ರಿಂದ 400 ರೂ. ಹಣ ಪಡೆಯುವವರಿದ್ದಾರೆ.

ಶೇ.92.5ರಷ್ಟು ಮಂದಿ ಕಟ್ಟಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸುಮಾರು ಮೂರ್ನಾಲ್ಕು ವಾರಗಳಿಂದ ಅವರಿಗೆ ದುಡಿಮೆ ಇಲ್ಲ, ತಿನ್ನಲು ಆಹಾರವೂ ಇಲ್ಲ. ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಜನ್ ಸಾಹಸ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಉತ್ತರ ಹಾಗೂ ದಕ್ಷಿಣ ಭಾರತದ ಕಟ್ಟಡ ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಶೇ.42ರಷ್ಟು ಕಾರ್ಮಿಕರಿಗೆ ಲಾಕ್‍ಡೌನ್ ಆರಂಭದಿಂದ ಒಂದು ದಿನವೂ ಪಡಿತರ ದೊರೆತಿಲ್ಲ ಎಂದು ತಿಳಿದುಬಂದಿದೆ.

ಲಾಕ್‍ಡೌನ್ 21 ವಾರಗಳ ಕಾಲ ವಿಸ್ತರಣೆಗೊಳ್ಳುವ ಮೊದಲು ಒಂದು ವಾರ ಕೂಡ ನಮ್ಮ ಕುಟುಂಬದವರಿಗೆ ಊಟ ಒದಗಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಶೇ.66ರಷ್ಟು ಮಂದಿ ಕಾರ್ಮಿಕರು ಹೇಳಿಕೊಂಡಿದ್ದಾರೆ.

ಆಹಾರ, ನೀರು, ಹಣ ಯಾವುದೂ ಇಲ್ಲದ ಕಾರಣ ಸಾಕಷ್ಟು ಮಂದಿ ಇನ್ನೂ ನಗರಗಳಲ್ಲೇ ಉಳಿದುಕೊಂಡಿದ್ದಾರೆ. ಇನ್ನೂ ಕೆಲವು ಮಂದಿ ತಮ್ಮ ಊರುಗಳಿಗೆ ತೆರಳಿದ್ದು, ಅಲ್ಲಿ ಇನ್ನೊಂದು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಆದಾಯವೂ ಇಲ್ಲ ಕೆಲಸವೂ ಇಲ್ಲ. ಏನು ಮಾಡುವುದು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರವು ಮೂರು ತಿಂಗಳು ಬ್ಯಾಂಕ್‍ಗಳ ಇಎಂಐ ಕಡಿತ ಮಾಡುವುದರೊಂದಿಗೆ ಸಾಕಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದೆ. ಆದರೆ, ನಾವು ತೆಗೆದುಕೊಂಡಿರುವ ಕೈಸಾಲ ಏನು ಮಾಡಬೇಕು. ಅದನ್ನು ಯಾರು ತೀರಿಸುತ್ತಾರೆ ಎಂದು ಶೇ.31ರಷ್ಟು ಕಾರ್ಮಿಕರು ಪ್ರಶ್ನೆ ಮಾಡಿದ್ದಾರೆ. ಶೇ.79ರಷ್ಟು ಕಾರ್ಮಿಕರಿಗೆ ಸಾಲ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ