ಮೊಟೆವಿಡಿಯೋ(ಉರುಗ್ವೆ), ಏ.8-ಉರುಗ್ವೆ ದೇಶದ ಕರಾವಳಿ ಪ್ರದೇಶದಲ್ಲಿ ಐಷಾರಾಮಿ ಪ್ರವಾಸಿ ನೌಕೆಯೊಂದರಲ್ಲಿರುವ 217 ಮಂದಿಯಲ್ಲಿ ಬಹುತೇಕರಿಗೆ ಕಿಲ್ಲರ್ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆಸ್ಟೇಲಿಯ, ಯುರೋಪ್ ಮತ್ತು ಅಮೆರಿಕದ ಪ್ರವಾಸಿಗರು ಮತ್ತು ನೌಕಾ ಸಿಬ್ಬಂದಿ ಸೇರಿದಂತೆ 217 ಮಂದಿ ಅಂಟಾರ್ಟಿಕಾ ಟೂರ್ ಕ್ರೂಯಿಸ್ ಶಿಪ್ನಲ್ಲಿದ್ದು, ಇವರಲ್ಲಿ ಶೇ.60 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದು ಆತಂಕಕಾರಿಯಾಗಿದೆ.
ಡೆಡ್ಲಿ ಕೊರೊನಾ ಸೋಂಕು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಉಲ್ಬಣಗೊಂಡ ನಂತರ ಐಷಾರಾಮಿ ನೌಕೆಗಳಲ್ಲಿ ಕಂಡು ಬರುತ್ತಿರುವ ಮೂರನೇ ಪ್ರಕರಣ ಇದಾಗಿದೆ.
ಜಪಾನ್, ಅಮೆರಿಕದ ಕ್ಯಾಲಿಪೋರ್ನಿಯಾ ಕಡಲ ಪ್ರದೇಶಗಳಲ್ಲಿ ಈ ಹಿಂದೆ ವಿಹಾರ ನೌಕೆಗಳ ಪ್ರವಾಸಿಗರು ಮತ್ತು ಹಡಗಿನ ಸಿಬ್ಬಂದಿಗಳಲ್ಲೂ ಸೊಂಕು ಕಾಣಿಸಿಕೊಂಡಿತ್ತು.
ಆಂಟಾರ್ಟಿಕಾ ಪ್ರವಾಸ ನೌಕೆಯಲ್ಲಿರುವ ಶೇ.60ರಷ್ಟು ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಈ ಹಡಗಿನಲ್ಲಿ ಇರುವವರನ್ನು ಪ್ರತ್ಯೇಕ ಸ್ಥಳಗಳಲ್ಲಿ ಇಳಿಸಿ ಅವರವರ ದೇಶಗಳಿಗೆ ತೆರಳುವಂತೆ ಮಾಡಲು ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆಸ್ಟ್ರೇಲಿಯಾದ ನೌಕಾ ಸಂಸ್ಥೆ ತಿಳಿಸಿದೆ.
ದಿ ಗ್ರೆಗ್ ಮೊರ್ಟಿಮೆರ್ ಹೆಸರಿನ ಈ ನೌಕೆ ಮಾರ್ಚ್ 15ರಂದು ಅಂಟಾರ್ಟಿಕಾ ಹಿಮ ಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು.