ಮಳವಳ್ಳಿ, ಏ.8- ಮಂಡ್ಯ ಭಾರೀ ಸುರಕ್ಷಿತ ಎಂದು ಭಾವಿಸಲಾಗಿತ್ತು. ಆದರೆ, ನಿನ್ನೆಯಿಂದ ಈವರೆಗೆ ಕೊರೊನಾ ಸೋಂಕು ನಾಲ್ಕು ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ಇಂದು ಬೆಳಗ್ಗೆ ನಡೆಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ತಾಲ್ಲೂಕು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದು, ಅವರಿಂದ ಸಚಿವರು ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈದ್ಗಾ ಮೊಹಲ್ ಬಡಾವಣೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದರಂತೆ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಮಳವಳ್ಳಿ ಪಟ್ಟಣ ಸೇರಿದಂತೆ 7 ಕಿ.ಮೀ. ವರೆಗೆ ಝೋನ್ ಘೋಷಣೆ ಮಾಡಲಾಗಿದೆ. ಪ್ರತಿ ನಿತ್ಯ ನಾನು ವಿಡಿಯೋ ಕಾನ್ಪರೆನ್ಸ್ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೆಟರ್ ದುರಸ್ತಿ ಇರುವ ಬಗ್ಗೆ ಪತ್ರಕರ್ತರು ಸಚಿವರ ಗಮನ ಸೆಳೆದಾಗ ಈ ವಿಷಯ ನನ್ನ ಗಮನಕ್ಕೆ ಈಗ ತಂದಿದ್ದೀರಿ. ಕೂಡಲೇ ಸರಿಪಡಿಸಲು ಸಂಬಂಧಪಟ್ಟವರಿಗೆ ತಿಳಿಸುತ್ತೇನೆ. ವೆಂಟಿಲೇಟರ್ ಇಲ್ಲದೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಮಾತ್ರ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.