ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮತ್ತೊಬ್ಬರು ಮೃತ ಪಟ್ಟಿರುವುದು ಪತ್ತೆಯಾಗಿದೆ

ಬೆಂಗಳೂರು, ಏ.8- ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮತ್ತೊಬ್ಬರು ಮೃತ ಪಟ್ಟಿರುವುದು ಮರೋಣೋತ್ತರವಾಗಿ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ ಐದಕ್ಕೇರಿದೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗಿನ ಪರೀಕ್ಷೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 181ಕ್ಕೇರಿದೆ. ಮತ್ತೆ ಹೊಸದಾಗಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಮಹಾಮಾರಿ ಕೊರೊನಾ ವ್ಯಾಪಿಸಿದೆ.

ಅವರಲ್ಲಿ ದೆಹಲಿಯ ಜಾಮೀಯ ಮಸೀದಿ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ನಾಲ್ಕು ಮಂದಿ ವಿದೇಶದಿಂದ ಬಂದವರ ಜೊತೆಗಿನ ಸಂಪರ್ಕದಿಂದ ಸೋಂಕು ತಗುಲಿದೆ.

ಕಲ್ಬುರ್ಗಿಯಲ್ಲಿ ಮತ್ತೆ ಇಬ್ಬರಿಗೆ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ ಒಬ್ಬ ವ್ಯಕ್ತಿ ನಿನ್ನೆ ಮೃತ ಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟ ವ್ಯಕ್ತಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿರುವುದು ಖಚಿತವಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೇಟಿನ್ ಸ್ಪಷ್ಟ ಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ ಐದಕ್ಕೇರಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಇಬ್ಬರು ಮೃತ ಪಟ್ಟಂತಾಗಿದೆ.

ದೇಶದಲ್ಲೇ ಕೊರೊನಾದಿಂದ ಮೊದಲ ಸಾವಾಗಿದ್ದು ಕಲ್ಬುರ್ಗಿ ಜಿಲ್ಲೆಯಲ್ಲಿ. ಅಂದಿನಿಂದ ಜಿಲ್ಲಾಡಳಿತ ತೆಗೆದುಕೊಂಡ ಬಿಗಿ ಕ್ರಮಗಳಿಂದ ಸೋಂಕು ನಿಯಂತ್ರಣದಲ್ಲಿತ್ತು. ಆದರೆ ಇತ್ತೀಚೆಗೆ ಮತ್ತೆ ಸೋಂಕು ಹೆಚ್ಚಾಗುತ್ತಿದೆ.

ಕೊರೊನಾ ಸೋಂಕೊನಿಂದ ರಾಜ್ಯದಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ನಿನ್ನೆ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಮೃತಪಟ್ಟ ನಂತರ ಪ್ರಯೋಗಾಲಯದ ವರದಿ ಬಂದಿದೆ. ಆತನಲ್ಲಿ ಸೋಂಕಿರುವುದು ಖಚಿತವಾಗಿದೆ.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ 75 ವರ್ಷದ ಮಹಿಳೆ ಸಾವನ್ನಪ್ಪುವ ಮೂಲಕ ಎರಡನೇ ಸಾವಾಗಿತ್ತು. ಅನಂತರ ತುಮಕೂರು ಜಿಲ್ಲೆಯ ಶಿರಾದಲ್ಲಿ ಮೂರನೇ ವ್ಯಕ್ತಿ, ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ಕನೇ ವ್ಯಕ್ತಿ ಮೃತ ಪಟ್ಟಿದ್ದರು.

ಸೋಂಕಿತರ ಸಂಖ್ಯೆ:
ನಿನ್ನೆ ಕಲ್ಬುರ್ಗಿಯ 175 ಸಂಖ್ಯೆಯ ರೋಗಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರ ಜೊತೆಗಿನ ಸಂಪರ್ಕದಿಂದ ಅವರ 72 ವರ್ಷದ ತಾಯಿಗೂ ಸೋಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಮಹಿಳೆಯನ್ನು ಕಲ್ಬುರ್ಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಕನ್ನಡದ 26 ವರ್ಷದ ಮಹಿಳೆ ದುಬೈನಿಂದ ಬಂದವರೊಡನೆ ಸಂಪರ್ಕದಿಂದ ಸೋಂಕು ತಗುಲಿದೆ. ಅವರನ್ನು ಭಟ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಗಿ ಸಂಖ್ಯೆ 134 ಮತ್ತು 138ರ ಜೊತೆಗಿನ ಸಂಪರ್ಕದಿಂದ ಮಂಡ್ಯದ 35 ವರ್ಷದ ವ್ಯಕ್ತಿ ಸೋಂಕು ಬಾಧಿತರಾಗಿದ್ದಾರೆ. ದೆಹಲಿ ಪ್ರವಾಸ ಕೈಗೊಂಡು ವಾಪಾಸಾದವರ ಜೊತೆ ಸಂಪರ್ಕದಲ್ಲಿದ್ದ ಚಿಕ್ಕಬಳ್ಳಾಪುರದ 23 ವರ್ಷದ ಯುವಕ ಮತ್ತು ಬೆಂಗಳೂರಿನ 27 ವರ್ಷದ ಮಹಿಳೆಯಲ್ಲೂ ಸೋಂಕು ಪತ್ತೆಯಾಗಿದೆ.

ಎಲ್ಲಾ ಸೋಂಕಿತರನ್ನು ಆಯಾ ಜಿಲ್ಲೆಯ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ