![kumaraswamy_yeddi](http://kannada.vartamitra.com/wp-content/uploads/2019/03/kumaraswamy_yeddi-678x381.jpeg)
ಬೆಂಗಳೂರು, ಏ.8- ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಮುದ್ರಣ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ನೀವು ತಳೆದ ನಿಲುವಿನ ಬಗ್ಗೆ ನಿಮ್ಮದೇ ಪಕ್ಷದ ಕೆಲವು ಜನಪ್ರತಿನಿಧಿಗಳು ಪ್ರಚೋದನಕಾರಿ ಮತ್ತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮುಖ್ಯಮಂತ್ರಿಗಳಾದ ನೀವು ಇಂತಹವುಗಳಿಗೂ ಕಡಿವಾಣ ಹಾಕಬೇಕಿದೆ ಎಂದಿದ್ದಾರೆ.
ಸಮುದಾಯಗಳ ನಡುವೆ ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವ ದುಷ್ಕರ್ಮಿಗಳ ವಿರುದ್ಧ ಮುಖ್ಯಮಂತ್ರಿಗಳು ತಾಳಿದ ದೃಢ ನಿಲುವು ಸೂಕ್ತ ಮತ್ತು ಸ್ವಾಗತಾರ್ಹ. ಆದರೆ , ಯಡಿಯೂರಪ್ಪನವರ ಸ್ಪಷ್ಟ ಎಚ್ಚರಿಕೆಯ ನಂತರವೂ ಅನೇಕ ಮಾಧ್ಯಮಗಳು ಸಂಕುಚಿತ ಮನೋಭಾವನೆಯ ದ್ವೇಷಕಾರಿಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದೆಂದೂ ಕಂಡರಿಯದ ರಾಷ್ಟ್ರೀಯ ಆರೋಗ್ಯ ಸಂಕಟದ ಈ ದಿನಗಳಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ. ಅಪರಾಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯವೇ ಕೋಮುದಳ್ಳುರಿಗೆ ಬಲಿಯಾಗುವ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ.