ಬೆಳಗಾವಿ: ಕೊರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಲು ದೆಹಲಿಯ ತಬ್ಲಿಘಿಗಳೇ ಕಾರಣ ಎಂಬ ಸುದ್ದಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ದೆಹಲಿಯ ನಿಜಾಮುದ್ದಿನ್ ತಬ್ಲಿಘಿ ಜಮಾತ್ ಮರ್ಕಜ್ನಿಂದ ಬಂದ ಮೂವರು ಅಪರಿಚಿತರು ಪರಾರಿಯಾಗಿದ್ದಾರೆ.
ಮೂವರು ತಬ್ಲಿಘಿಗಳು ತಾಲೂಕಿನ ಸುಳೇಭಾವಿ ಗ್ರಾಮದ ಗುಡ್ಡದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಯುವಕರ ಗುಂಪು ಸೋಮವಾರ ಗುಡ್ಡಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ಅಪರಿಚಿತರು ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸುಳೆಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಕೆಲವು ದಿನಗಳಿಂದ ಗ್ರಾಮದ ಗೌಪ್ಯ ಸ್ಥಳಗಳಲ್ಲಿ ಕೆಲವರು ಅಡಗಿ ಕುಳಿತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವ ಹಿನ್ನೆಲೆಯಲ್ಲಿ ಗ್ರಾಮದ ಗುಡ್ಡದ ಮೇಲೆ ಯುವಕರು ಹೋದಾಗ ಮೂರು ಜನ ತಮ್ಮ ಕಡೆ ಇದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾರೆ. ಗುಡ್ಡದಲ್ಲಿ ಕೆಲ ಹೊತ್ತು ಹುಡುಕಾಡಿದರೂ ಅಲ್ಲಿ ಯಾರೂ ಇರಲಿಲ್ಲ.
ಸ್ಥಳದಲ್ಲಿ ಸಿಕ್ಕಿದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗನಲ್ಲಿ ಸಾಬೂನು, ಪೇಸ್ಟ್ ಸೇರಿದಂತೆ ಕೆಲವು ಜೀವನಾವಶ್ಯಕ ವಸ್ತುಗಳು ಹಾಗೂ ಬಟ್ಟೆಗಳು ಇದ್ದವು. ಈ ಬ್ಯಾಗ್ ಅನ್ನು ಪೊಲೀಸರು ಪರಿಶೀಲನೆ ನಡೆಸಿ ನಂತರ ಸುಟ್ಟು ಹಾಕಿದ್ದಾರೆ.
ಈ ಭಾಗದಲ್ಲಿರುವ ಮಸೀದಿಯಲ್ಲಿ ಇನ್ನೂ ಕೆಲವರು ಅಡಗಿ ಕುಳಿತಿದ್ದಾರೆ ಹಾಗೂ ರಾತ್ರಿ ಹೊತ್ತಿನಲ್ಲಿ ಇಲ್ಲಿ ಕೆಲವು ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದು, ಕೂಡಲೇ ಪೊಲೀಸರು ಪರಿಶೀಲನೆ ನಡೆಸಬೇಕು, ಅಡಗಿ ಕುಳಿತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜೊತೆಗೆ ಓಡಿ ಹೋದವರ ಬಳಿ ಇದ್ದ ಬ್ಯಾಗ್ ಅನ್ನು ಪೊಲೀಸರು ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.