ಕಳೆದೊಂದು ತಿಂಗಳಿನಿಂದ ಕೊರೋನಾದಿಂದ ಮುಕ್ತವಾಗಿದ್ದ ಮಂಡ್ಯದಲ್ಲಿ ಆತಂಕ ಸೃಷ್ಟಿ : ಒಂದೇ ದಿನದಲ್ಲಿ ಮೂವರಿಗೆ ಕೊರೋನಾ ಸೊಂಕು ದೃಢ

ಮಂಡ್ಯ : ಕಳೆದೊಂದು ತಿಂಗಳಿನಿಂದ ಕೊರೋನಾದಿಂದ ಮುಕ್ತವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಇದೀಗ ಮೂರು ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ತಬ್ಲಿಘಿಯವರಿಂದಲೇ ಸೋಂಕು ಹರಡಿರುವುದು ಹೆಚ್ಚಿನ ಭೀತಿಯನ್ನು ಸೃಷ್ಟಿಸಿದೆ.

ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಭಾಗವಹಿಸಿದ್ದ ಏಳು ಮಂದಿಯ ಪೈಕಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿತ ವ್ಯಕ್ತಿಗಳು 32, 36 ಹಾಗೂ 65 ವರ್ಷದವರಾಗಿದ್ದಾರೆ. ಉಳಿದ ಇಬ್ಬರಿಗೆ ನೆಗೆಟೀವ್ ಬಂದಿದ್ದರೆ, ಮತ್ತಿಬ್ಬರ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪುನರ್ ಪರಿಶೀಲನೆಗಾಗಿ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಗಮಂಗಲದ 5 ಪ್ರಕರಣಗಳು ನೆಗೆಟೀವ್ ಬಂದಿದೆ ಎಂದು ಜಿಲ್ಲಾಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

ಮಳವಳ್ಳಿ ಮೂಲದ ಏಳು ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಲಾಗಿದ್ದು, ಫೆ. 4ರಂದು ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಫೆ. 13ರವರೆವಿಗೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ನಂತರ ಫೆ. 13ರಂದು ದೆಹಲಿಯಿಂದ ಧರ್ಮಗುರುಗಳೊಂದಿಗೆ 7 ಮಂದಿಯೂ ಸಂಪರ್ಕಕ್ರಾಂತಿ ಎಕ್ಸ್‍ಪ್ರೆಸ್ ಮೂಲಕ ಬೆಂಗಳೂರಿನ ಯಶವಂತಪುರಕ್ಕೆ ಮಧ್ಯರಾತ್ರಿ 1 ಗಂಟೆಗೆ ಬಂದಿಳಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧರ್ಮ ಗುರುಗಳು ಮೈಸೂರು ಯಶ್ವಂತಪುರ ಎಕ್ಸ್‍ಪ್ರೆಸ್ ರೈಲಿನಲ್ಲಿ ಮೈಸೂರಿಗೆ ತೆರಳಿದರೆ, ಮಳವಳ್ಳಿ ಮೂಲದ 7 ಮಂದಿ ಯಶವಂತಪುರದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಮುಂಜಾನೆ 3 ಗಂಟೆಗೆ ಆಗಮಿಸಿ ಅಲ್ಲಿಂದ ಸಾರಿಗೆ ಬಸ್ ಮೂಲಕ ಮದ್ದೂರಿಗೆ ಬಂದಿಳಿದರು. ಬಳಿಕ ಮದ್ದೂರಿನಿಂದ ಮಳವಳ್ಳಿಗೆ ಮಾರುತಿ-800 ಹಾಗೂ ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ ಎಂದು ತಿಳಿಸಿದರು.

ಸೋಂಕು ದೃಢಪಟ್ಟಿರುವ ಮೂವರು ದೆಹಲಿಯಿಂದ ಬಂದಿದ್ದ ಧರ್ಮಗುರುಗಳೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಅವರಿಂದಲೂ ಹರಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಜಿಲ್ಲಾಕಾರಿಗಳು, 10 ಧರ್ಮಗುರುಗಳ ಪೈಕಿ 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಅವರಿಂದಲೇ ಇವರಿಗೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ ಎಂದರು.

ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಗಳು ಮೇಲ್ನೋಟಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ. ಅವರಿಗೆ ಜ್ವರ, ನೆಗಡಿ, ಶೀತ, ಕೆಮ್ಮು ಈ ತರಹದ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ, ಇವರ ಗಂಟಲು ದ್ರವ ಮತ್ತು ರಕ್ತ ಪರೀಕ್ಷೆ ವರದಿಯಲ್ಲಿ ಪಾಸೀಟಿವ್ ಬಂದಿರುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಜಿಲ್ಲಾಡಳಿತಕ್ಕೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಧಾರ್ಮಿಕ ಸಭೆ ನಡೆದ ದಿನದಂದು ಪಾಲ್ಗೊಂಡವರಷ್ಟೇ ಅಲ್ಲದೆ, ನಂತರದಲ್ಲಿ ಭಾಗವಹಿಸಿದ್ದವರೂ ಸಹ ಮಾಹಿತಿ ನೀಡುವುದರ ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಕಾರಿ ಡಾ. ವೆಂಕಟೇಶ್ ಮನವಿ ಮಾಡಿದರು.

ದೆಹಲಿಯ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡುವಂತೆ ಕೋರಿದ್ದರೂ, ಇದುವರೆವಿಗೂ ಯಾರೂ ಯಾರೊಬ್ಬರೂ ಸಹ ಮಾಹಿತಿ ನೀಡಿಲ್ಲ. ಸಭೆಗೆ ಹೋಗಿದ್ದವರಿಂದಲೇ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ