ಬೆಂಗಳೂರು, ಏ.6- ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿರುವಂತೆ ಸರ್ಕಾರ ಸೂಚನೆ ನೀಡಿದ್ದರೂ ರಸ್ತೆ ಖಾಲಿ ಇದೆ ಎಂದು ಪುತ್ರನಿಗೆ ಪೋಷಕರು ಕಾರು ಚಾಲನೆ ತರಬೇತಿ ನೀಡುತ್ತಿದ್ದುದನ್ನು ಗಮನಿಸಿದ ಎಸ್ಪಿ ರವಿ ಚನ್ನಣ್ಣನವರ್ ತರಾಟೆಗೆ ತೆಗೆದುಕೊಂಡು ಕಾರನ್ನು ಸೀಜ್ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಗನಿಗೆ ಕಾರ್ ಚಾಲನೆ ತರಬೇತಿ ನೀಡುತ್ತಿದ್ದ ಪೋಷಕರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಬುದ್ದಿವಾದ ಹೇಳೀದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಎಸ್ಪಿ ಚನ್ನಣ್ಣನವರ್ ಹಾಗೂ ಡಿವೈಎಸ್ಪಿ ರಂಗಪ್ಪ ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಗಸ್ತಿನಲ್ಲಿದ್ದಾಗ, ಪೋಷಕರೊಬ್ಬರು ಮಗನಿಗೆ ಕಾರ್ ಚಾಲನೆ ತರಬೇತಿ ನೀಡುತ್ತಿದ್ದನ್ನು ಗಮನಿಸಿದ್ದಾರೆ.
ತಕ್ಷಣ ಎಸ್ಪಿ ಅವರು ಪೋಷಕರ ಬಳಿ ಹೋಗಿ ಇಂತಹ ಸಂದರ್ಭದಲ್ಲಿ ಕಾರು ಚಾಲನೆ ತರಬೇತಿ ನೀಡುವುದು ತಪ್ಪು ಎಂದು ಬುದ್ದಿವಾದ ಹೇಳಿ ಕಾರನ್ನು ವಶಕ್ಕೆಪಡೆದು ಲಾಕ್ಡೌನ್ ಮುಗಿದ ನಂತರ ಠಾಣೆಗೆ ಬಂದು ಕಾರನ್ನು ಪಡೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಇರುವುದನ್ನು ಬಿಟ್ಟು, ಆದೇಶ ಉಲ್ಲಂಘಿಸಿ ರಸ್ತೆಗೆ ಬಂದಿದ್ದಲ್ಲದೇ ಮಗನಿಗೆ ಕಾರ್ ಚಾಲನೆ ತರಬೇತಿ ನೀಡಿರುವುದು ಸರಿಯಲ್ಲ ಎಂದು ಎಸ್ಪಿ ಅವರು ಪೋಷಕರಿಗೆ ಬುದ್ದಿ ಮಾತು ಹೇಳಿದ್ದಾರೆ.