ತುಮಕೂರು,ಏ.6- ಕೊರೊನಾ ಕಾರ್ಮೋಡದ ನಡುವೆಯೂ ಕಿಡಿಗೇಡಿಗಳ ಗುಂಪೊಂದು ನಕ್ಸಲ್ ನಂಟು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಶವವನ್ನು ಮನೆ ಬಾಗಿಲಿಗೆ ಎಸೆದು ಹೋಗಿರುವ ಘಟನೆ ಪಾವಗಡ ತಾಲ್ಲೂಕಿನ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಡ್ಡರೇವು ಗ್ರಾಮದ ಗಂಗಾಧರ್ (40) ಕೊಲೆಯಾದ ನತದೃಷ್ಟ.
ಗಂಗಾಧರ್ ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಬಿಕೆ ಹಳ್ಳಿಯಲ್ಲಿರುವ ರೇಷನ್ ಅಂಗಡಿಗೆ ಹೋಗಿ ರೇಷನ್ ತರಲು ಬೈಕ್ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ 8 ಮಂದಿ ದುಷ್ಕರ್ಮಿಗಳ ತಂಡ ಕೊಡಲಿಯಿಂದ ತಲೆಗೆ ಒಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ನಂತರ ಶವವನ್ನು ಮನೆ ಬಾಗಿಲಿಗೆ ತಂದು ಎಸೆದು ಹೋಗಿರುವ ಘಟನೆ ಸುತ್ತಮುತ್ತಲ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ.
ಕೊಲೆ ಮಾಡಿದವರನ್ನು ಸತೀಶ್, ಓಬಣ್ಣ ಮತ್ತವರ ತಂಡ ಎಂದು ಗುರುತಿಸಲಾಗಿದ್ದು, ಕೊಲೆಗಾರರು ಸಹ ನಕ್ಸಲ್ ಹಿನ್ನೆಲೆ ಹೊಂದಿದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
12 ವರ್ಷಗಳ ಹಿಂದೆ ಗಂಗಾಧರ್ ಅವರ ಸಹೋದರನನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
ಕೊಲೆಗಾರರು ಹಾಗೂ ಮೃತಪಟ್ಟ ಗಂಗಾಧರ್ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗಷ್ಟೆ ದೂರವಾಗಿದ್ದರು ಎನ್ನಲಾಗಿದೆ.
ದೂರವಾದ ನಂತರ ಹಾವು-ಮುಂಗುಸಿಯಂತಾಗಿದ್ದ ಈ ಎರಡೂ ತಂಡಗಳ ನಡುವೆ ಶಾಸಕ ವೆಂಕಟರಮಣಪ್ಪ ಅವರು ಸಂಧಾನ ನಡೆಸಿ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಮನವೊಲಿಸಿದ್ದರು.
ಮೇಲ್ನೋಟಕ್ಕೆ ವೈಮನಸ್ಯ ತೊರೆದಂತೆ ತೋರಿಸಿಕೊಳ್ಳುತ್ತಿದ್ದ ಉಭಯ ಗುಂಪಿನವರು ಒಳಗೊಳಗೇ ದ್ವೇಷ ಸಾಧಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಸತೀಶ ಹಾಗೂ ಗಂಗಾಧರ್ ಪರಸ್ಪರ ಹೊಡೆದಾಡಿಕೊಂಡಿದ್ದರು. ಇದೇ ವಿಚಾರವಾಗಿ ಜಿದ್ದು ಸಾಧಿಸುತ್ತಿದ್ದ ಸತೀಶ ಮತ್ತವರ ತಂಡ ಬೆಳಗ್ಗೆ ಏಕಾಏಕಿ ದಾಳಿ ನಡೆಸಿ ಗಂಗಾಧರ್ ಅವರನ್ನು ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ವಿಶೇಷ ತಂಡ ರಚನೆ: ಗಂಗಾಧರ್ ಕೊಲೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ ಅವರು ಕೊಲೆಗಾರರ ಪತ್ತೆಗೆ ವೃತ್ತ ನಿರೀಕ್ಷಕ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ.
ಈಗಾಗಲೇ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗಿಳಿದಿರುವ ವಿಶೇಷ ತಂಡದ ಪೊಲೀಸರು ನೆರೆಯ ಆಂಧ್ರ ಪ್ರದೇಶ ಮತ್ತಿತರ ಪ್ರದೇಶಗಳಿಗೆ ತೆರಳಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.