ಹೆತ್ತವರಿಗೆ ಮಕ್ಕಳು ಹೇಗೋ ರೈತರಿಗೆ ಕೃಷಿ ಹಾಗೂ ಫಸಲು : ಕೃಷಿ ಸಚಿವ ಬಿ.ಸಿ.ಪಾಟೀಲ್

ಧಾರವಾಡ, ಏ.6- ಹೆತ್ತವರಿಗೆ ಮಕ್ಕಳು ಹೇಗೋ ರೈತರಿಗೆ ಕೃಷಿ ಹಾಗೂ ಫಸಲು. ತಂದೆ-ತಾಯಿ ಮಕ್ಕಳನ್ನು ಕಾಳಜಿ, ಪ್ರೀತಿಯಿಂದ ಬೆಳೆಸುವಂತೆ ರೈತರು ತಮ್ಮ ಬೆಳೆಗಳನ್ನು ಅಷ್ಟೇ ಕಾಳಜಿ ಪ್ರೀತಿಯಿಂದ ಬೆಳೆಸಿರುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಂತಃಕರಣದಿಂದ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಷ್ಟ ಬಂದಾಗ ಹೆತ್ತವರು ಮಕ್ಕಳನ್ನು ಕೈಬಿಡುವುದಿಲ್ಲ. ಅದೇ ರೀತಿ ರೈತರು ತಮ್ಮ ಫಸಲನ್ನು ಯಾವುದೇ ಅನಿರೀಕ್ಷಿತ ಆತಂಕಕ್ಕೊಳಗಾಗಿಯಾಗಲಿ ಬೆಳೆಗಳನ್ನು ನಾಶ ಮಾಡುವುದಾಗಲಿ, ರಸ್ತೆಗೆ ಸುರಿಯುವುದಾಗಲಿ ಮಾಡಬಾರದು. ಆತ್ಮಹತ್ಯೆ ಹೇಡಿಗಳ ಕೆಲಸ. ಇಂತಹ ಹೇಡಿತನದ ಕೆಲಸಕ್ಕೆ ರೈತರು ಯಾವುದೇ ಕಾರಣಕ್ಕೂ ಮುಂದಾಗಬಾರದು ಎಂದು ಮತ್ತೊಮ್ಮೆ ಮನವಿ ಮಾಡಿದರು.

ಜನತಾ ಕಫ್ರ್ಯೂ ಮಾಡುವಾಗ ಎರಡು ದಿನ ಮೊದಲೇ ಸೂಚನೆ ಇದ್ದಿದ್ದರಿಂದ ಜನರಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.ಆದರೆ, ಮಾ.24ರಂದು ಪ್ರಧಾನಿ ನರೇಂದ್ರ ಮೋದಿ ಕೊರೊನಾ ನಿಯಂತ್ರಣಕ್ಕಾಗಿ ಅನಿರೀಕ್ಷಿತವಾಗಿ ಲಾಕ್‍ಡೌನ್ ಕರೆ ನೀಡಬೇಕಾಯಿತು. ಇದರಿಂದ ಅನಿವಾರ್ಯವಾಗಿ ತೊಂದರೆಯಾಗಿದೆ.

ರೈತರು ಇಡೀ ನಾಡಿಗೆ ಅನ್ನ ನೀಡುವ ಶಕ್ತಿಯಾಗಿದ್ದು, ಅನ್ನ ನೀಡುವ ರೈತರಿಗೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಸಭೆಗಳನ್ನು ನಡೆಸಿ ರೈತರಿಗಾಗಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಳ್ಳೆಯ ದಿನಗಳು ಬರಲಿವೆ. ಸ್ವಲ್ಪ ತಾಳ್ಮೆ ವಹಿಸಿ ಕಾಯುವುದು ಉತ್ತಮ ಎಂದು ಮನವಿ ಮಾಡಿದರು.

ಶೀಥಲೀಕರಣ ಘಟಕಗಳನ್ನು ರೈತರು ಬಳಸಿಕೊಂಡು ಫಸಲು ಹಾಳಾಗದಂತೆ ಕ್ರಮವಹಿಸಬೇಕು. ಖರೀದಿ ಕೇಂದ್ರಗಳು ಈಗಾಗಲೇ ಆರಂಭವಾಗಿವೆ.

ಈಗಾಗಲೇ ಕೆಲವು ಕಡೆ ಮಳೆ ಪ್ರಾರಂಭವಾಗಿದೆ. ಧಾರವಾಡದಲ್ಲಾಗಲಿ, ರಾಜ್ಯದ ಯಾವುದೇ ಜಿಲ್ಲೆಯಲ್ಲಾಗಲಿ ಬಿತ್ತನೆ ಬೀಜ, ಗೊಬ್ಬರಗಳ ಸಮರ್ಪಕ ದಾಸ್ತಾನು ಇದೆ. ಯಾವುದೇ ಕೊರತೆಯಿಲ್ಲ. ರೈತ ಸಂಪರ್ಕ ಕೇಂದ್ರಗಳು ಸಹ ತೆರೆದಿವೆ. ಕೆಲವು ದಿನಗಳ ಹಿಂದೆ ರೈತ ಸಂಪರ್ಕ ಕೇಂದ್ರ ತೆರೆಯದ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಗೊಬ್ಬರ, ಕ್ರಿಮಿನಾಶಕ, ಔಷಧಿ, ಕೃಷಿ ಉಪಕರಣಗಳ ಅಂಗಡಿ-ಮಳಿಗೆಗಳನ್ನು ತೆರೆಯಲಾಗಿದೆ ಎಂದರು.

ಸಭೆಯಲ್ಲಿ ಎಂಎಲ್‍ಎ ಅಮೃತ್ ದೇಸಾಯಿ, ಪ್ರಸಾದ್ ಅಬ್ಬಯ್, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ