ಲಂಡನ್, ಏ.6- ವಿಶ್ವಾದ್ಯಂತ ಸಾವು-ನೋವು ಮತ್ತು ಅಪಾರ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಕೊರೊನಾ ಹೆಮ್ಮಾರಿ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂಬ ವಿಶ್ವಾಸವನ್ನು ಬ್ರಿಟನ್ ಮಹಾರಾಣಿ ಎರಡನೇ ಎಲಿಜೆಬತ್ ವ್ಯಕ್ತಪಡಿಸಿದ್ದಾರೆ.
ನಾಲ್ಕು ನಿಮಿಷಗಳ ಟೆಲಿವಿಷನ್ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ 54 ಸದಸ್ಯ ಕಾಮನ್‍ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರೂ ಆದ 93 ವರ್ಷದ ಮಹಾರಾಣಿ ಅವರು, ಈಗ ಇಡೀ ವಿಶ್ವ ಸಂಕಷ್ಟ ಎದುರಿಸುತ್ತಿದೆ. ಪಿಡುಗಿನ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಯುದ್ಧದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.
ಸದ್ಯದಲ್ಲೇ ಈ ಪೀಡೆಯಿಂದ ಇಡೀ ವಿಶ್ವ ಮುಕ್ತವಾಗಲಿದೆ. ಒಳ್ಳೆಯ ದಿನಗಳು ಮತ್ತೆ ಹಿಂದಿರುಗಲಿವೆ. ಅಲ್ಲಿಯವರೆಗೂ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮುಂದುವರೆಸೋಣ ಎಂದು ಎರಡನೇ ಎಲಿಜೆಬತ್ ಸಲಹೆ ನೀಡಿದ್ದಾರೆ.
ಲಂಡನ್ ವಿಂಡ್‍ಸರ್ ಕ್ಯಾಸಲ್ ಪ್ರಾಚೀನ ಕೋಟೆಯಲ್ಲಿ ಇವರ ಭಾಷಣದ ವಿಡಿಯೋ ಮುದ್ರಿಕೆಯನ್ನು ನಿನ್ನೆ ರಾತ್ರಿ ಪ್ರಸಾರ ಮಾಡಲಾಗಿದೆ.
ಕೋವಿಡ್-19 ಸೋಂಕಿಗೆ ಇಂಗ್ಲೆಂಡ್‍ನಲ್ಲಿ ಈವರೆಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಹಸ್ರಾರು ಮಂದಿ ಸೋಂಕು ಪೀಡಿತರಾಗಿದ್ದಾರೆ.