ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣು

ವಾಷಿಂಗ್ಟನ್, ಏ.6-ಮಹಾಮಾರಿ ಕೊರೊನಾ ದಾಳಿಯಿಂದ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಹೈರಾಣಾಗಿದೆ. ದಿನನಿತ್ಯ ಸರಾಸರಿ 1,000 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಳ್ಳುತ್ತಿದ್ದು, ಸಾವಿನ ಸಂಖ್ಯೆ 10,000 ದಾಟಿರುವುದು ಪರಿಸ್ಥಿತಿಯ ಭೀಕರತೆ ಸಾಕ್ಷಿಯಾಗಿದೆ.

ಕಿಲ್ಲರ್ ವೈರಾಣು ಸೋಂಕಿಗೆ ಕಡಿವಾಣ ಹಾಕಲು ಅಧ್ಯಕ್ಷ ಡೊನಾಲ್ಡ್‍ಟ್ರಂಪ್ ನೇತೃತ್ವದ ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಮಹಾಮಾರಿಯ ಕಬಂಧ ಬಾಹುಗಳು ಮತ್ತಷ್ಟು ಬಿಗಿಯಾಗುತ್ತಿವೆ.

ಅಮೆರಿಕದಲ್ಲಿ ನಿನ್ನೆಒಂದೇ ದಿನ 1,200 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿವೆ.

ಅಮೆರಿಕದಲ್ಲಿ ಸುಮಾರು 3.50 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಹೊಂದಿರುವ ಅಮೆರಿಕ ಏಪ್ರಿಲ್ 3ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಪ್ರಕರಣ ದಾಖಲಾದ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಕೇವಲ 24 ತಾಸುಗಳಲ್ಲೇ ಸುಮಾರು 1,500 ಮಂದಿ ಬಲಿಯಾಗಿದ್ದಾರೆ. ಕಿಲ್ಲರ್ ಕೊರೊನಾ ಸೋಂಕು ಆಕ್ರಮಣಕ್ಕೆ ಒಳಗಾಗಿರುವ ಜಗತ್ತಿನ 210ಕ್ಕೂ ಹೆಚ್ಚು ದೇಶಗಳಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆ ಸೋಂಕಿತರು ಸಾವಿಗೀಡಾದ ನಿದೇಶನಗಳು ಇಲ್ಲ.

ಅಮೆರಿಕದ ಎಲ್ಲ 50 ಪ್ರಾಂತ್ಯಗಳು ಮತ್ತು ರಾಜ್ಯಗಳಿಗೂ ಕೋವಿಡ್-19 ವೈರಸ್ ಕಬಂಧ ಬಾಹುಗಳು ವಿಸ್ತರಿಸಿ ರುದ್ರತಾಂಡವ ನಡೆಸಿದೆ. ಈವರೆಗೆ 7,600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಗನಚುಂಬಿ ನಗರಿ ನ್ಯೂಯಾರ್ಕ್ ನರಕ ಸದೃಶವಾಗಿದ್ದು, ಅಲ್ಲಿ ಅತಿ ಹೆಚ್ಚು ಮರಣ ಪ್ರಕರಣಗಳು ವರದಿಯಾಗಿದೆ.

ನ್ಯೂಯಾರ್ಕ್ ಸಾವಿನ ಮನೆಯಾಗಿದ್ದು, ಅಲ್ಲಿನ ಬಹುತೇಕ ಎಲ್ಲಾ ಆಸ್ಪತ್ರೆಗಳು ಸೋಂಕಿತರ ಮತ್ತು ವಿಷಮ ಸ್ಥಿತಿಯಲ್ಲಿರುವ ರೋಗಿಗಳಿಂದ ತುಂಬಿ ತುಳುಕಿದೆ. ತಾತ್ಕಾಲಿಕ ವೈದ್ಯಕೀಯ ಶಿಬಿರಗಳನ್ನು ನಿರ್ಮಿಸಿ ಸಾವಿರಾರು ಬಾಧಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ