ಬೆಂಗಳೂರು: ಬೆಂಗಳೂರು ನಗರವನ್ನು ಈಗಾಗಲೇ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೊರೋನಾ ಹಾಟ್’ಸ್ಪಾಟ್ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಘೋಷಣೆ ಮಾಡಿದೆ.
ಮೈಸೂರು, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರಗಳನ್ನು ರಾಜ್ಯ ಸರ್ಕಾರ ರೆಡ್ ಝೋನ್ ಎಂದು ಘೋಷಣೆ ಮಾಡಿದೆ.
ಕೊರೋನಾ ನಿಯಂತ್ರಣಕ್ಕೆ ತಡೆಯುವ ಸಲುವಾಗಿ ಕೆಲ ಗ್ರಾಮ ಪ್ರದೇಶಗಳನ್ನು ಬಫರ್ ಜೋನ್ ಎಂದೂ ಕೂಡ ಕರೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಎನ್’ಸಿಡಿಸಿ ಪಟ್ಟಿಯಲ್ಲಿರಲಿ, ಬಿಡಲಿ ಆದರೆ, ಕರ್ನಾಟಕ ಸರ್ಕಾರ ಈಗಾಗಲೇ ಬೆಂಗಳೂರ ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಈಗಾಗಲೇ ರಾಜ್ಯ ಸರ್ಕಾರ ಬೆಂಗಳೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ನಗರದಲ್ಲಿ 2 ಮಿಲಿಯನ್ ರಷ್ಟು ಜನಸಂಖ್ಯೆಯಿದ್ದು, ಐಟಿ ಕ್ಷೇತ್ರದಲ್ಲಿರುವ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಮುಂದಿನ ಎರಡು ವಾರಗಳಲ್ಲಿ ಈ ಕ್ರಮ ಮತ್ತಷ್ಟು ಬಿಗಿಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಹೇಳಿದ್ದಾರೆ.
ರೆಡ್ ಝೋನ್ ಘೋಷಣೆಯಾಗಿರುವ ನಗರ ಹಾಗ ಜಿಲ್ಲೆಗಳ ಮೇಲೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮನೆಗಳ ಬಾಗಿಲಿಗೆ ತೆರಳಿ ಕೊರೋನಾ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಕ್ವಾರಂಟೈನ್ ನಲ್ಲಿರುವ ಜನರ ಸಂಪರ್ಕದಲ್ಲಿರುವವರ ಮೇಲೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಈ ಜಿಲ್ಲೆಗಳಲ್ಲಿ ಘೋಷಣೆ ಮಾಡಲಾಗಿರುವ ಲಾಕ್’ಡೌನ್ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ.
ಮೈಸೂರಿನಲ್ಲಿ ಈಗಾಗಲೇ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಂಜನಗೂಡು ಜುಬಿಲೆಂಟ್ ಕಾರ್ಖಾನೆಯ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ.
ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಜೊತೆಗೆ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಇದೀಗ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಹೋಂ ಕ್ವಾರೆಂಟೈನ್ ನಿಂದ ಮಾಸ್ ಕ್ವಾರಂಟೈನ್ ನಲ್ಲಿಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.