ವಿದೇಶಿ ಪ್ರಯಾಣಿಕರ ನಿಗಾ ವ್ಯವಸ್ಥೆ ಬಲಪಡಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ವಿಶ್ವದ ವಿವಿಧ ಭಾಗಗಳಿಂದ ಭಾರತಕ್ಕೆ ಆಗಮಿಸಿದವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಗಾದವರ ಸಂಖ್ಯೆ ಮಧ್ಯೆ ಭಾರೀ ವ್ಯತ್ಯಾಸವಿರುವಂತೆ ಕಂಡು ಬರುತ್ತಿದೆ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಹೀಗಾಗಿ ಲಾಕ್ ಡೌನ್’ಗೂ ಮುನ್ನ ವಿದೇಶಗಳಿಂದ ದೇಶಕ್ಕೆ ಆಗಮಿಸಿದ ಪ್ರಯಾಣಿಕರ ಮೇಲೆ ನಿಗಾವಹಿಸುವ ವ್ಯವಸ್ಥೆ ಬಲಪಡಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರೀ ದೊಡ್ಡ ಗಂಡಾಂತರ ಎದುರಾಗಲಿಗೆ ಎಂದು ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಮಾ.23ರವರೆಗೂ ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಬಂದ 15 ಲಕ್ಷಕ್ಕಿಂತ ಹೆಚ್ಚು ಮಂದಿಯನ್ನು ತಪಾಸಣೆ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ, ವಿದೇಶದಿಂದ ಭಾರತಕ್ಕೆ ಬಂದವರ ಸಂಖ್ಯೆಗೂ, ಹೀಗೆ ತಪಾಸಣೆಗೊಳಗಾದವರ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ.

ಹೀಗಾಗಿ ಇಂಥ ವ್ಯವಸ್ಥೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಒಂದು ವೇಳೆ ಯಾರಾದರೂ ತಪಾಸಣೆಯಿಂದ ಹೊರಗೆ ಉಳಿದಿದ್ದಾರೆಂದು ಕಂಡು ಬಂದಲ್ಲಿ ಅವರನ್ನು ಪತ್ತೆ ಮಾಡಬೇಕು. ಒಂದು ವೇಳೆ ಇಂತಹ ಒಂದೇ ಒಂದು ಪ್ರಕರಣ ನಮ್ಮ ತಪಾಸಣಾ ವ್ಯಾಪ್ತಿಯಿಂದ ಹೊರಗೆ ಉಳಿದರೂ, ಅದು ನಮ್ಮ ಅಷ್ಟೂ ಪ್ರಯತ್ನವನ್ನು ವಿಫಲಗೊಳಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ವಿವಿಧ ಅಂತದರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 15,24,266 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ