ಏ.14ರ ನಂತರವೂ ಲಾಕ್​ಡೌನ್​ ಮುಂದುವರಿಯಲಿದೆ ಅನ್ನೋದು ಸುಳ್ಳು; ಕೇಂದ್ರದ ಸ್ಪಷ್ಟನೆ

ನವದೆಹಲಿ:’ 21 ದಿನಗಳಲ್ಲಿ ಕೊರೋನಾ ವೈರಸ್​ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಹೀಗಾಗಿ, ಲಾಕ್​ಡೌನ್​ ಅವಧಿ ಏಪ್ರಿಲ್​ 14ರ ನಂತರವೂ ಮುಂದುವರಿಯಲಿದೆ. ದೇಶದ ಜನತೆ ಇದಕ್ಕೆ ಸಿದ್ಧವಾಗಿ‘- ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಲಾಕ್​ಡೌ​ನ್​ನಿಂದಾಗಿ ರೈತರು, ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಕೆಲವರು ನಿತ್ಯದ ಕೂಳಿಗೂ ಕಷ್ಟಪಡುವಂತಾಗಿದೆ. ಈಗ ಲಾಕ್​ಡೌನ್​ ಮುಂದುವರಿಯಲಿದೆ ಎನ್ನುವ ವಿಚಾರ ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಕೂಡ ನಡೆಯುತ್ತಿವೆ.

ಈ ಬಗ್ಗೆ ಪಿಐಬಿ ಸ್ಪಷ್ಟನೆ ನೀಡಿರುವ ಸಂಸದೀಯ ಕಾರ್ಯದರ್ಶಿ, “ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು” ಎಂದಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ನಿನ್ನೆಯವರೆಗೆ 1,024 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇಂದು ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಮಹಿಳೆ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಲಾಕ್​ಡೌನ್ ಆದೇಶದ ನಡುವೆಯೂ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸಹಜವಾಗಿಯೇ ಆತಂಕ ಹೆಚ್ಚಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ