ಬೆಂಗಳೂರು, ಮಾ.18- ಕೊರೊನಾ ವೈರಾಣು ಹೆಚ್ಚುತ್ತಲೇ ಇರುವುದರಿಂದ ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸರ್ಕಾರ ನೀಡಿರುವ ಆದೇಶವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೊರೊನಾ ಭೀತಿ ಹೆಚ್ಚುತ್ತಲೇ ಇರುವುದರಿಂದ ಚಿತ್ರ ಮಂದಿರಗಳನ್ನು ಇನ್ನೂ ಒಂದು ವಾರ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ಇನ್ನೂ ಒಂದು ವಾರ ಎಲ್ಲಾ ಚಿತ್ರಮಂದಿರಗಳು, ಮಾಲ್‍ಗಳಲ್ಲಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುತ್ತದೆ. ಈ ಕುರಿತು ಚಿತ್ರಮಂದಿರಗಳ ಮಾಲೀಕರಿಗೆ ಮಾಹಿತಿ ರವಾನಿಸುತ್ತೇವೆ ಎಂದು ಹೇಳಿದರು.
ಸ್ಟುಡಿಯೋ ಒಳಗಡೆ ನಡೆಯುವಂತಹ ನಾಲ್ಕೈದು ಮಂದಿ ಕುಳಿತು ಮಾಡುವಂತಹ ಕೆಲಸಗಳನ್ನು ಮಾತ್ರ ನಿರ್ವಹಿಸಲಾಗುತ್ತದೆ. ಉಳಿದಂತೆ ಒಳಾಂಗಣ, ಹೊರಾಂಗಣ ಚಿತ್ರೀಕರಣ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ ಎಂದರು.
ಚಿತ್ರೋದ್ಯಮ ಬಂದ್ ಆಗಿದ್ದರಿಂದ ಈಗಾಗಲೇ ಬಹಳಷ್ಟು ನಷ್ಟವಾಗಿದೆ. ಇನ್ನೂ ಒಂದು ವಾರ ಬಂದ್ ಆಗುವುದರಿಂದ 100 ಕೋಟಿಗೂ ಅಧಿಕ ನಷ್ಟವಾಗಲಿದೆ.
ಅಲ್ಲದೆ ಇದನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವವರಿಗೆ ಬಹಳ ತೊಂದರೆಯಾಗಲಿದೆ. ಚಲನಚಿತ್ರ ಕಾರ್ಮಿಕರಿಗೆ , ದಿನಗೂಲಿ ಕಾರ್ಮಿಕರಿಗೆ ಅಲ್ಲದೆ ಕೋಟ್ಯಂತರ ರೂ. ಬಂಡವಾಳ ಹಾಕಿ ನಿರ್ಮಿಸಿರುವ ಚಿತ್ರಗಳು ಪ್ರದರ್ಶನಗೊಳ್ಳದೆ ಇರುವುದರಿಂದ ಇಡೀ ಚಿತ್ರೋದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಆದರೂ ಕೊರೊನ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ ಎಂದು ಜೈರಾಜ್ ತಿಳಿಸಿದರು.