ಕೊರೊನಾ ಸೋಂಕು ಹಿನ್ನೆಲೆ-ಹಾಸ್ಟೆಲ್ ಮತ್ತು ಪಿಜಿಯಲ್ಲಿರುವವರು ತಮ್ಮ ಮನೆಗಳಿಗೆ ವಾಪಸಾಗುವಂತೆ ಬಿಬಿಎಂಪಿ ಮನವಿ

ಬೆಂಗಳೂರು, ಮಾ.17- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಮತ್ತು ಪಿಜಿಯಲ್ಲಿರುವವರು ತಮ್ಮ ಮನೆಗಳಿಗೆ ವಾಪಸಾಗುವಂತೆ ಬಿಬಿಎಂಪಿ ಮನವಿ ಮಾಡಿಕೊಂಡಿದೆ.

ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹೊರ ಊರಿನಿಂದ ಆಗಮಿಸಿ ನಗರದ ಹಾಸ್ಟೆಲ್ ಮತ್ತು ಪಿಜಿಯಲ್ಲಿ ತಂಗಿರುವವರು ಕೂಡಲೇ ತಮ್ಮ ಊರುಗಳಿಗೆ ಹಿಂದಿರುಗುವಂತೆ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಊರಿಗೆ ತೆರಳಲು ಸಾಧ್ಯವಾಗದೆ ಹಾಸ್ಟೆಲ್‍ನಲ್ಲೇ ತಂಗಿರುವ ವಿದ್ಯಾರ್ಥಿಗಳು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅನಿಲ್‍ಕುಮಾರ್ ಸಲಹೆ ನೀಡಿದ್ದಾರೆ.

ಹಾಸ್ಟೆಲ್ ಮತ್ತು ಪಿಜಿ ಮಾಲೀಕರು ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆಗೆ ವಿದ್ಯಾರ್ಥಿಗಳಿಗೆ ಸ್ಯಾನಿಟೈಜೇಷನ್ ಮತ್ತಿತರ ಸವಲತ್ತುಗಳನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ಪಿಜಿಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವಂತೆ ವಾರ್ಡನ್‍ಗಳು ಎಚ್ಚರಿಕೆ ವಹಿಸಬೇಕು. ಅಚಾತುರ್ಯದಿಂದ ಪಿಜಿ ಮತ್ತು ಹಾಸ್ಟೆಲ್ ನಿವಾಸಿಗಳಿಗೆ ಕೊರೊನಾ ಸೋಂಕು ತಗುಲಿದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪಿಜಿ, ಹಾಸ್ಟೆಲ್‍ಗಳಲ್ಲಿ ನಿಯಮಿತವಾಗಿ ತ್ಯಾಜ್ಯ ಹಾಗೂ ಸ್ವಚ್ಛತೆ ನಿರ್ವಹಿಸಬೇಕು. ಈ ಸ್ಚಚ್ಛತೆ ಕಾಪಾಡುವುದು ಮಾಲೀಕರ ಜವಾಬ್ದಾರಿ. ಕೊಠಡಿಗಳಲ್ಲಿ ಹೆಚ್ಚು ಮಂದಿ ಇರುವುದು ನಿಷೇಧ ಹೇರಿದ್ದು, ಪಿಜಿ, ಹಾಸ್ಟೆಲ್ ಮಾಲೀಕರು ಅಥವಾ ವ್ಯವಸ್ಥಾಪಕರು ನಿವಾಸಿಗಳನ್ನು ಬಲವಂತಾಗಿ ಹೊರಹಾಕುವಂತಿಲ್ಲ. ಅವರು ಪಯಾರ್ಯ ವ್ಯವಸ್ಥೆ ಮಾಡಿಕೊಳ್ಳಲು ಸಮಯ ನೀಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಅದೇ ರೀತಿ ಪಾರ್ಕ್‍ಗಳಲ್ಲಿರುವ ಜಿಮ್ ಸಲಕರಣೆಗಳನ್ನು ಉಪಯೋಗಿಸದಂತೆಯೂ ಎಚ್ಚರಿಕೆ ವಹಿಸಬೇಕು. ಪಾರ್ಕ್‍ಗಳಲ್ಲಿ ಜನ ಒಗ್ಗೂಡಬಾರದು. ಜನವಸತಿ ಪ್ರದೇಶ, ಅಪಾರ್ಟ್‍ಮೆಂಟ್‍ಗಳಲ್ಲಿ, ರೆಸಿಡೆನ್ಷಿಯಲ್ ಅಸೋಸಿಯೇಷನ್ ಪದಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆಯೂ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

ನಗರದ ಕ್ಷೇಮಾಭಿವೃದ್ಧಿ ಸಂಘ ಮತ್ತು ವಸತಿ ಸಮುಚ್ಛಯ: ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಬಾರದು. ನೆಲ, ಗೋಡೆ, ಕುರ್ಚಿ ಸೇರಿದಂತೆ ಹೆಚ್ಚು ಜನ ಸೇರುವ ಜಾಗಗಳಲ್ಲಿ ಬ್ಲೀಚಿಂಗ್ ಪೌಡರ್, ಸೋಡಿಯಂ ಸೇರಿದಂತೆ ಲಿಕ್ವಿಡ್ ಸಾಧನಗಳಿಂದ ಶುಚಿಗೊಳಿಸಬೇಕು.

ಕಾರ್ಮಿಕರಿಗೆ ಅಗತ್ಯ ಸಾಧನ ನೀಡಬೇಕು, ನಡೆದಾಡುವ ಪ್ರದೇಶ, ಪಾರ್ಕ್, ಜಾಗಿಂಗ್ ಮಾಡುವ ಜಾಗಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು. ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಕ್ರೀಡಾ ಸಭಾಂಗಣ, ಜಿಮ್, ಈಜುಕೊಳ ಬಳಸುವುದಕ್ಕೆ ನಿಷೇಧ ಹೇರಲಾಗಿದೆ. ಬೇಸಿಗೆ ಶಿಬಿರಕ್ಕೆ ಅವಕಾಶವಿಲ್ಲ. ಲಿಫ್ಟ್ ಭಾಗ ಮತ್ತು ಬಟನ್ ಸ್ವಚ್ಛಗೊಳಿಸಬೇಕು. ಲಿಫ್ಟ್ ಬಟನ್ ಬಳಸುವವರು ಕಡ್ಡಾಯವಾಗಿ ಸಾಬೂನು ಅಥವಾ ಲಿಕ್ವಿಡ್‍ನಿಂದ ಕೈತೊಳೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ