‘ಚೈನೀಸ್ ವೈರಸ್’ ಎದು ಕರೆದು ಚೀನಾ ವಿರುದ್ಧ ಸೇಡು ತೀರಿಸಿಕೊಂಡ ಟ್ರಂಪ್!

ವಾಷಿಂಗ್ಟನ್:ಚೀನಾದಲ್ಲಿ ಕೊರೊನಾ ವೈರಸ್ ಹರಡಲು ಅಮೆರಿಕ ಸೇನೆ ಕಾರಣ ಎಂಬ ಚೀನಾದ ಗಂಭೀರ ಆರೋಪಕ್ಕೆ ಅಮೆರಿಕ ಕೆಂಡಾಮಂಡಲವಾಗಿದೆ. ಈಗಾಗಲೇ ಚೀನಿ ರಾಯಭಾರಿಗೆ ಸಮನ್ಸ್ ಜಾರಿ ಮಾಡಿರುವ ಟ್ರಂಪ್ ಸರ್ಕಾರ, ಇಂತಹ ಸುಳ್ಳು ಆರೋಪಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದೆ.

ಈ ಮಧ್ಯೆ ಕೊರೊನಾ ವೈರಸ್ ನ್ನು ‘ಚೈನೀಸ್ ವೈರಸ್’ ಎಂದು ಕರೆಯುವ ಮೂಲಕ ಟ್ರಂಪ್ ಚೀನಾ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಕೊರೊನಾ ಹರಡಲು ಕಾರಣ ಅಮೆರಿಕ ಎಂದ ಚೀನಾವನ್ನು ಮಾತಿನಲ್ಲೇ ಟ್ರಂಪ್ ತಿವಿದಿದ್ದಾರೆ.

ಈ ಕುರಿತು ಮಾತನಾಡಿರುವ ಟ್ರಂಪ್, ‘ಚೈನೀಸ್ ವೈರಸ್’ ಸೃಷ್ಟಿಸಿರುವ ಭೀತಿಯನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಕೊರೊನಾ ವೈರಸ್ ಹರಡಲು ಚೀನಾವೇ ಕಾರಣ ಎಂದು ಪರೋಕ್ಷವಾಗಿ ಟ್ರಂಪ್ ಹೇಳಿದ್ದಾರೆ.

ಈ ಹಿಂದೆ ಅಮೆರಿಕದ ಹಲವು ಅಧಿಕಾರಿಗಳು ಹಾಗೂ ಮಿತ್ರ ರಾಷ್ಟ್ರಗಳು ಕರೊನಾ ವೈರಸ್ ನ್ನು ಚೀನಿ ವೈರಸ್ ಎಂದೇ ಉಲ್ಲೇಖಿಸಿದ್ದವು. ಇದೇ ಮೊದಲ ಬಾರಿಗೆ ಸ್ವತಃ ಅಮೆರಿಕ ಅಧ್ಯಕ್ಷರೇ ‘ಚೈನೀಸ್ ವೈರಸ್’ ಎಂದು ಕರೆದು ಚೀನಾಗೆ ತಿರುಗೇಟು ನೀಡಿದ್ದಾರೆ.

ಚೀನಾದ ವುಹಾನ್ ನಲ್ಲಿ ಕೊರೊನಾ ವೈರಸ್ ಹರಡಲು ಅಮೆರಿಕ ಸೇನೆಯ ಪಿತೂರಿಯೇ ಕಾರಣ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜಾಹೋ ಲಿಜಿಯಾನ್ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ