ಭೋಪಾಲ್: ಮಧ್ಯಪ್ರದೇಶ ಬಜೆಟ್ ಅಧಿವೇಶನ ಮಾ.26ಕ್ಕೆ ಮುಂದೂಡಲ್ಪಟ್ಟಿದೆ. ಈ ಮೂಲಕ ವಿಶ್ವಾಸ ಮತಯಾಚನೆ ಸಾಬೀತು ಮಾಡಲು ಮುಖ್ಯಮಂತ್ರಿ ಕಮಲ್ ನಾಥ್ಗೆ ಇನ್ನೂ 10 ದಿನ ಕಾಲಾವಕಾಶ ದೊರೆತಿದೆ.
ಶನಿವಾರ ಮಧ್ಯಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿದ್ದ ಬಿಜೆಪಿ ನಾಯಕರು, ಸಿಎಂ ಕಮಲನಾಥ್ ಅವರಿಗೆ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಲಾಲ್ಜೀ ಟಂಡನ್ ಅವರ ಬಳಿ ಮನವಿ ಮಾಡಿತ್ತು. ಅಂತೆಯೇ ಇಂದು ವಿಶ್ವಾಸ ಮತಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಅಧಿವೇಶನವನ್ನು ಸ್ಪೀಕರ್ ಲಾಲ್ಜೀ ಟಂಡನ್ ಮುಂದೂಡಿದ್ದಾರೆ.
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್ನಲ್ಲಿ ಕೇವಲ 92 ಶಾಸಕರಿದ್ದಾರೆ. ಈಗ ವಿಶ್ವಾಸಮತಯಾಚನೆ ಮುಂದೂಡಲ್ಪಟ್ಟಿದ್ದು, ಹೀಗಾಗಿ ರಾಜೀನಾಮೆ ನೀಡಿದ 22 ಶಾಸಕರ ಮನವೊಲಿಸಲು ಕಮಲನಾಥ್ಗೆ 10 ದಿನ ಸಮಯಾವಕಾಶ ದೊರೆತಿದೆ.