ಕೊರೋನಾ ರಾಷ್ಟ್ರೀಯ ವಿಪತ್ತು ಎಂದ ಕೇಂದ್ರ; ವೈರಸ್​ ನಿಯಂತ್ರಣಕ್ಕೆ ರಾಜ್ಯಕ್ಕೆ 84 ಕೋಟಿ ರೂ.

ಬೆಂಗಳೂರು; ಕೊರೋನಾ ವೈರಸ್ಅನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರ ಮಾರಣಾಂತಿಕ ವೈರಸ್ ತಡೆಗೆ 84 ಕೋಟಿ ರೂ. ಹಣ ನೀಡಿದೆ ಎಂದು ಸಚಿವ ಆರ್​. ಅಶೋಕ್ ತಿಳಿಸಿದ್ದಾರೆ.

ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೋನಾ ವೈರಸ್​ ಭಾರತ ಮಾತ್ರವಲ್ಲ ಕರ್ನಾಟಕದಲ್ಲೂ ಮಿಂಚಿನ ವೇಗದಲ್ಲಿ ವ್ಯಾಪಿಸಿದ್ದು ಈಗಾಗಲೇ ಎರಡು ಬಲಿ ಪಡೆದಿದೆ. ಹೀಗಾಗಿ ಕೊರೋನಾ ವಿರುದ್ಧ ರಾಷ್ಟ್ರಾಧ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ.
ಕೊರೋನಾ ಪರಿಸ್ಥಿತಿಯನ್ನು ರಾಷ್ಟ್ರೀಯ  ವಿಪತ್ತು ಎಂದು ಪರಿಗಣಿಸಿರುವ ಪರಿಣಾಮ ಈ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಕೃತಿ ವಿಕೋಪ ನಿಧಿಯಿಂದ ಮೀಸಲಿಟ್ಟಿರುವ ಹಣವನ್ನು ನೀಡುತ್ತಿದೆ. ಈ ಪೈಕಿ ರಾಜ್ಯಕ್ಕೆ 84 ಕೋಟಿ ರೂ ಸಂದಾಯವಾಗಿದೆ. ಈ ಹಣವನ್ನು ಕರೋನಾ ನಿಯಂತ್ರಣ ಕ್ಕೆ ಬೇಕಾದ ಔಷಧ, ಸ್ವಚ್ಚತೆ, ಸ್ಯಾನಿಟೇಷನ್, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಬಳಕೆ ಮಾಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಆರ್​. ಅಶೋಕ್, “ಇಂತಹ ಸಂದರ್ಭದಲ್ಲಿ ಯಾವಾಗಲೂ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಬೇಕಿತ್ತು. ಆದರೆ, ಮೊದಲ ಬಾರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಸ್​ಡಿಆರ್​ಎಫ್​ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ನೀಡಿದೆ. ಕರೋನಾ ವೈರಸ್ ರಾಷ್ಟ್ರೀಯ ವಿಪತ್ತು ಎಂಬ ಕಾರಣಕ್ಕೆ ಕೇಂದ್ರದ ಹಣ ಬಳಕೆಗೆ ಅನುಮತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜತೆ ಸಭೆ ನಡೆಸಿ ಹಣ ಬಳಕೆ ಕುರಿತು ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ