ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಸ್ಫೋಟಕ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಕೈಫ್ ಉತ್ತಮ ಬ್ಯಾಟಿಂಗ್ ದರ್ಶನದಿಂದ ಭಾರತ ಲೆಜೆಂಡ್ಸ್ ತಂಡವು ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ 5 ವಿಕೆಟ್‍ಗಳ ಗೆಲುವು ಸಾಧಿಸಿದೆ.
ರೋಡ್ ಸೇಫ್ಟಿ ವಲ್ರ್ಡ್ ಸೀರೀಸ್ 2020 ಟೂರ್ನಿಯ ಭಾಗವಾಗಿ ಕೆ.ಎಲ್.ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತವು 9 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ.
ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಲು ಕೊನೆಯ 18 ಎಸೆತಗಳಲ್ಲಿ 39 ರನ್ ಗಳಿಸಬೇಕಿತ್ತು. ಈ ಸ್ಫೋಟಕ ಬ್ಯಾಟಿಂಗ್ ತೋರಿದ ಇರ್ಫಾನ್ ಪಠಾಣ್ ಒಂಬತ್ತು ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಹಾಗೂ ಮೂರು ಒಂಟಿ ರನ್ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿದ ಇರ್ಫಾನ್ ಪಠಾಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಲೆಜೆಂಡ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತವು 18.4 ಓವರ್ ಗಳಲ್ಲಿ 5 ವಿಕೆಟ್‍ಗೆ ಗುರಿ ತಲುಪಿತು. ಭಾರತದ ಪರ ಇರ್ಫಾನ್ ಪಠಾಣ್ ಔಟಾಗದೆ 57 ರನ್ ಮತ್ತು ಮೊಹಮ್ಮದ್ ಕೈಫ್ 46 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಭಾರತೀಯ ಇನ್ನಿಂಗ್ಸ್ ಆರಂಭವು ತುಂಬಾ ಕೆಟ್ಟದಾಗಿತ್ತು. ಆರಂಭಿಕ 3 ವಿಕೆಟ್‍ಗಳು 19 ರನ್‍ಗಳಿಗೆ ಕುಸಿದವು. ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 3 ರನ್ ಮತ್ತು ಸಚಿನ್ ತೆಂಡೂಲ್ಕರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಯುವರಾಜ್ ಸಿಂಗ್ ಕೇವಲ 1 ರನ್‍ಗೆ ಔಟಾದರು. ಈ ವೇಳೆ ಕೈಫ್ ಮತ್ತು ಪಠಾಣ್ ಉತ್ತಮ ಜೊತೆಯಾಟ ನೀಡಿ ತಂಡವನ್ನು ಗೆಲ್ಲಿಸಿದರು. ಈ ಸಮಯದಲ್ಲಿ ಶ್ರೀಲಂಕಾ ಚಮಿಂಡಾ ವಾಸ್ 2 ವಿಕೆಟ್ ಪಡೆದರೆ, ರಂಗನಾ ಹೆರತ್ ಮತ್ತು ಸಚಿತ್ರ ಸೇನನಾಯಕ ತಲಾ ಒಂದು ವಿಕೆಟ್ ಕಿತ್ತರು.
ದಿಲ್ಶನ್– ಕಪುಗೆಡೆರಾ ಬ್ಯಾಟಿಂಗ್:
ಶ್ರೀಲಂಕಾ ಲೆಜೆಂಡ್ಸ್ ತಂಡದ ನಾಯಕ ತಿಲ್ಲಕರತ್ನೆ ದಿಲ್ಶನ್ ಹಾಗೂ ರಮೇಶ್ ಕಲುವಿತರಣ ಅವರು 46 ರನ್‍ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ತಂಡಕ್ಕಾಗಿ ದಿಲ್ಶನ್ 23 ರನ್, ಚಮರ ಕಪುಗೆದೇರಾ 23 ರನ್ ಮತ್ತು ಕಲುವಿತರಣ 21 ರನ್ ಗಳಿಸಿದರು.ಈ ವೇಳೆ ಭಾರತದ ಮುನಾಫ್ ಪಟೇಲ್ ಅತ್ಯಂತ ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡಿದರು. ಅವರು 4 ಓವರ್ ಬೌಲಿಂಗ್ ಮಾಡಿ 19 ರನ್ ನೀಡಿ 4 ವಿಕೆಟ್ ಪಡೆದರು. ಜಹೀರ್ ಖಾನ್, ಇರ್ಫಾನ್ ಪಠಾಣ್, ಮನ್‍ಪ್ರೀತ್ ಗೋನಿ ಮತ್ತು ಸಂಜಯ್ ಬಂಗಾರ್ ತಲಾ ಒಂದು ವಿಕೆಟ್ ಪಡೆದರು.