ಕೊರೋನಾ ಶಂಕೆ: ಸೌದಿಯಿಂದ ಮರಳಿದ್ದ ವೃದ್ಧ ಸಾವು, ಆತಂಕದ ಅಗತ್ಯವಿಲ್ಲ

ಕಲಬುರ್ಗಿ : ಇಲ್ಲಿನ ಜಿಮ್ಸ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಶಂಕಿತ ವೃದ್ಧರೊಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಾದ್ಯಂತ ಆತಂಕ ಹೆಚ್ಚಾಗಿದೆ. ಆದರೆ ಇದುವರೆಗೂ ವ್ಯಕ್ತಿ ಕೊರೋನಾ ವೈರಸ್ನಿಂದಲೇ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಸ್ಪಷ್ಟನೆ ಆರೋಗ್ಯ ಇಲಾಖೆಯಿಂದ ಬಂದಿಲ್ಲ. ಜತೆಗೆ ಸೋಂಕಿನಿಂದಲೇ ಸಾವನ್ನಪ್ಪಿರುವುದು ಖಚಿತವಾಗಿಲ್ಲದ ಕಾರಣ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ

ಇತ್ತೀಚೆಗಷ್ಟೆ ಉಮ್ರಾ ಯಾತ್ರೆಗೆ ತೆರಳಿದ್ದ 76 ವರ್ಷದ ವೃದ್ಧರೊಬ್ಬರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ನಿನ್ನೆ ಹೈದ್ರಾಬಾದ್​ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಹಿನ್ನೆಲೆ ಅವರನ್ನು ಕಲಬುರ್ಗಿಯ ಜಿಮ್ಸ್​ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸೌದಿಯಿಂದ ವೃದ್ಧರು ಆಗಮಿಸಿದ ನಂತರ ಅವರ ಆರೋಗ್ಯ ಏರುಪೇರಾದಾಗ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಸಂಜೆ ಈ ಪರೀಕ್ಷೆಯ ವರದಿ ಬರಬೇಕಾಗಿತ್ತು. ಅಷ್ಟರಲ್ಲಿ ವೃದ್ಧರು ಸಾವನ್ನಪ್ಪಿದ್ದಾರೆ.

ಇನ್ನು ವೃದ್ಧರಿಗೆ ಕರೋನಾ ಸೋಂಕಿರುವ ಬಗ್ಗೆ ವೈದ್ಯಕೀಯ ಇಲಾಖೆ ದೃಢಪಡಿಸಿಲ್ಲ. ಈ ಹಿನ್ನೆಲೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆ ಅನಗತ್ಯವಾಗಿ ಆತಂಕ ಮೂಡಿಸುವ ಕೆಲಸವಾಗದಂತೆ ಎಚ್ಚರಿಕೆವಹಿಸಲಾಗಿದೆ. ಸಂಜೆ ವೃದ್ಧರ ವೈದ್ಯಕೀಯ ವರದಿ ಬಂದ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇನ್ನು ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪಾಟೀಲ್​ ಓಂ ಪ್ರಕಾಶ್​​, ಸಾವನ್ನಪ್ಪಿರುವ ವೃದ್ಧರ ಪ್ರಯಾಣದ ಇತಿಹಾಸ ಗಮನಿಸಲಾಗಿದೆ. ಅವರನ್ನು ಕೊರೋನಾ ಶಂಕಿತರು ಎಂದು ಘೋಷಿಸಲಾಗಿದೆ. ಅವರು ದುಬೈನಿಂದ ಬಂದಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ವೈದ್ಯಕೀಯ ವರದಿಗೆ ಕಾಯುತ್ತಿದ್ದೇವೆ. ಅವರ ಅಂತ್ಯಕ್ರಿಯೆ ಮಾಡಲು ಯಾವುದೇ ಅಡ್ಡಿ ಇಲ್ಲ. ಅವರು ಎಲ್ಲಿ ಎಲ್ಲಿ ಓಡಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಲಿದೆ ಎಂದರು.

ಮಾಹಿತಿ ಇಲ್ಲ ಎಂದ ಆರೋಗ್ಯ ಸಚಿವರುಸಾವನ್ನಪ್ಪಿದ ವೃದ್ಧರಲ್ಲಿ ಕೊರೋನಾ ಸೋಂಕು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ. ರಾಜ್ಯದಲ್ಲಿ ಇದುವರೆಗೂ ನಾಲ್ಕು ಪ್ರಕರಣಗಳು ಮಾತ್ರ ದೃಢವಾಗಿದೆ. ಈ ನಾಲ್ವರಿಗೂ ಐಸೊಲೇಷನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದರು.

ಕಲಬುರ್ಗಿಯಲ್ಲಿನ ವೃದ್ಧರ ಸಾವಿನ ಮಾಹಿತಿ ಇಲ್ಲ ಈ ಬಗ್ಗೆ ಎಲ್ಲಾ ಮಾಹಿತಿ ಸಂಗ್ರಹಿಸಿ ಬಳಿಕ ತಿಳಿಸುತ್ತೇವೆ. ಮಧ್ಯಾಹ್ನ 2ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು ಅಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿಸುತ್ತೇವೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ