ಆರೋಗ್ಯ ಇಲಾಖೆ ಜೊತೆ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಗದಿ; ಸಚಿವ ಸುರೇಶ್​ ಕುಮಾರ್

ಬೆಂಗಳೂರು: ರಾಜ್ಯದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆಶಿಕ್ಷಣ ಸಚಿವ ಸುರೇಶ್ಕುಮಾರ್ಇಂದು ಆನಂದ್ ರಾವ್ ವೃತ್ತದ ಬಳಿ ಇರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ ಸಸೂತ್ರವಾಗಿ ನಡೆಯುತ್ತಿದೆ. ಗಣಿತ, ಅಕೌಂಟೆನ್ಸಿ, ಐಚ್ಛಿಕ ಕನ್ನಡ ಪರೀಕ್ಷೆಗಳು ನಡೆಯುತ್ತಿವೆ. 4,61,350 ವಿದ್ಯಾರ್ಥಿಗಳು ಇವತ್ತು ಪರೀಕ್ಷೆ ಬರೆಯುತ್ತಿದ್ದಾರೆ. ನಿನ್ನೆ ಈ ಶಾಲೆಯಲ್ಲಿ ಒಬ್ಬನೇ ವಿದ್ಯಾರ್ಥಿ ಇದ್ದ ಎಂದರು.

ಬೆಂಗಳೂರಿನಲ್ಲಿ ಕೊರೋನಾ ಭೀತಿ ಹಿನ್ನೆಲೆ, 5ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಆದೇಶ ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.  ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ನರ್ಸರಿ, ಎಲ್​ಕೆಜಿ, ಯುಕೆಜಿ ಮತ್ತು 1-5ನೇ ತರಗತಿವರೆಗೆ ರಜೆ ನೀಡಲಾಗಿದೆ. ರಜೆ ಘೋಷಿಸಿದ್ದರೂ ಅನೇಕ ಶಾಲೆಗಳನ್ನು ತೆರೆಯಲಾಗಿದೆ. ಬಲವಂತವಾಗಿ ಮಕ್ಕಳಿಗೆ ಬರಲು ಸೂಚಿಸಲಾಗುತ್ತಿದೆ. ಸರ್ಕಾರ ಬಹಳ ಯೋಚಿಸಿ ತೆಗೆದುಕೊಂಡಿರುವ ನಿರ್ಧಾರ‌ ಇದು. ಇಂದು ಸಂಜೆಯೊಳಗೆ ಎಲ್ಲಾ ಬಿಇಒಗಳಿಂದ ಎಷ್ಟು ಶಾಲೆಗಳು ಮುಚ್ಚಿವೆ, ಎಷ್ಟು ತೆರೆದಿವೆ ಎಂದು ರಿಪೋರ್ಟ್ ನೀಡಬೇಕು ಎಂದು ತಿಳಿಸಲಾಗಿದೆ. ಶಾಲೆಗಳು ಪ್ರತಿಷ್ಠೆ ತೋರಿಸಿದರೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲೆಗಳಿಗೆ ಯಾವಾಗ ಪರೀಕ್ಷೆ ನಡೆಸಬೇಕು ಎಂದು ಮುಂದೆ ತಿಳಿಸುತ್ತೇವೆ. ಪರೀಕ್ಷೆ ಇರುತ್ತಾ ಅಥವಾ ಇಲ್ಲವಾ ಎನ್ನುವುದನ್ನು ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೆಲವು ಶಾಲೆಗಳು ಪರೀಕ್ಷೆ ಇಲ್ಲ ಎಂದು ಘೋಷಿಸಿರುವ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ಮಾಹಿತಿ ತರಿಸಿಕೊಂಡು ವಿಚಾರಿಸುತ್ತೇನೆ. ಆರನೇ ತರಗತಿಯಿಂದ ಒಂಭತ್ತನೇ ತರಗತಿಯವರೆಗೆ ಪರೀಕ್ಷೆ ಎಂದಿನಂತೆ ಇರಲಿದೆ, ತರಗತಿಗಳೂ ಇರಲಿವೆ ಎಂದು ತಿಳಿಸಿದರು.

ಇನ್ನು, ಶಿಕ್ಷಕರ ವರ್ಗಾವಣೆ ನೀತಿಯ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ, ಆನಂತರ ಮಾತನಾಡುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ