ಕೊರೊನಾ ತಡೆಗೆ ಚೀನಾದಲ್ಲಿ ಪೊಲೀಸರಿಗೆ ಸ್ಮಾರ್ಟ್ ಹೆಲ್ಮೆಟ್

ಬೀಜಿಂಗ್: ಕೊರೊನಾ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿದ್ದು, ಚೀನಾವೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವು ತಡೆಯಲು ಚೀನಾ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದು, ಇದೀಗ ಪೊಲೀಸರಿಗಾಗಿ ಸ್ಮಾರ್ಟ್ ಹೆಲ್ಮೆಟ್‍ಗಳನ್ನು ಸಿದ್ಧಪಡಿಸಿದೆ.

ಈ ಸ್ಮಾರ್ಟ್ ಹೆಲ್ಮೆಟ್‍ಗಳನ್ನು ಈಗಾಗಲೇ ಚೀನಾ ಪೊಲೀಸರು ಬಳಸುತ್ತಿದ್ದು, ಈ ಹೆಲ್ಮೆಟ್‍ಗಳು ಸ್ವಯಂಚಾಲಿತವಾಗಿ ಪಾದಚಾರಿಗಳ ದೇಹದ ಉಷ್ಣಾಂಶವನ್ನು ಕಂಡುಹಿಯುತ್ತವೆ. ಪೊಲೀಸು ಗಸ್ತಿನಲ್ಲಿದ್ದಾಗ ಪಾದಚಾರಿಗಳ ದೇಹದ ಉಷ್ಣಾಂಶದಲ್ಲಿ ಏರುಪೇರಾಗಿದ್ದರೆ ತಕ್ಷಣ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಚೀನಾ ಸಮರ ಸಾರಿದೆ.

ಸ್ಮಾರ್ಟ್ ಹೆಲ್ಮೆಟ್‍ಗಳು ಪಾದಚಾರಿಗಳ ದೇಹದ ಉಷ್ಣಾಂಶವನ್ನು ಕ್ಷಣಾರ್ಧದಲ್ಲಿ ಪೊಲೀಸರಿಗೆ ತೋರಿಸುತ್ತವೆ. ಈ ಮೂಲಕ ವ್ಯಕ್ತಿಗಳ ದೇಹದ ತಾಪಮಾನದಲ್ಲಿ ಏರುಪೇರಾಗಿರುವುದು ತಿಳಿಯುತ್ತದೆ. ಆಗ ರೋಗ ಇರುವುದು ತಿಳಿಯುತ್ತದೆ, ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುತ್ತದೆ. ಈ ಐಡಿಯಾ ಇಟ್ಟುಕೊಂಡು ಚೀನಾ ಕೊರೊನಾ ವಿರುದ್ಧ ಹೋರಾಟ ಮುಂದುವರಿಸಿದೆ.

ಈ ಸ್ಮಾರ್ಟ್ ಹೆಲ್ಮೆಟ್ ಕಾರ್ಯನಿರ್ವಹಣೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಮಾರ್ಟ್ ಹೆಲ್ಮೆಟ್‍ಗಳಲ್ಲಿನ ಕ್ಯಾಮೆರಾಗಳು ಮನುಷ್ಯನ ದೇಹದ ಉಷ್ಣಾಂಶವನ್ನು ಪತ್ತೆ ಮಾಡುವುದರಿಂದ ರೋಗ ತಡೆಗೆ ಸಹಕಾರಿಯಾಗಿದೆ. ಕೊರೊನಾ ತಡೆಗೆ ಚೀನಾ ಉತ್ತಮ ಉಪಾಯ ಕಂಡುಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಡಿಯೋದಲ್ಲಿ ಈ ಕುರಿತು ತೋರಿಸಲಾಗಿದ್ದು, ಪೊಲೀಸರು ದಿಟ್ಟಿಸಿ ನೋಡುವ ವ್ಯಕ್ತಿಯ ದೇಹದ ಉಷ್ಣಾಂಶ ಹೆಲ್ಮೆಟ್‍ನ ಗಾಜಿನ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಮೂಲಕ ರೋಗ ಇರುವ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಬಹುದಾಗಿದೆ. ಈ ಹೆಲ್ಮೆಟ್‍ನ ಕ್ಯಾಮೆರಾಗಳು 5 ಮೀಟರ್ ಅಂತರದಲ್ಲಿದ್ದ ಯಾವುದೇ ವ್ಯಕ್ತಿಯ ದೇಹದ ಉಷ್ಣಾಂಶವನ್ನು ತೋರಿಸುತ್ತವೆ. ಅಲ್ಲದೆ ಅಲಾರ್ಮ್ ಸೌಂಡ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ