ನವದೆಹಲಿ: ಕೆಟ್ಟ ಸಾಲಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಯೆಸ್ ಬ್ಯಾಂಕ್ನ್ನು ಆರ್ಬಿಐ ತನ್ನ ಸುಪರ್ದಿಗೆ ಪಡೆದ ಬೆನ್ನಲ್ಲೇ, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮುಂಬೈನಲ್ಲಿರುವ ಕಪೂರ್ ಮನೆ ಮೇಲೆ ಇಡಿ ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಮುಂಬೈನ ಸಮುದ್ರ ಮಹಲ್ ಪ್ರದೇಶದಲ್ಲಿರುವ ಕಪೂರ್ ಮನೆ ಮೇಲೆ ದಾಳಿ ನಡೆಸಿದ ಬಳಿಕ ಕೇಂದ್ರ ತನಿಖಾ ಸಂಸ್ಥೆಯು ರಾಣಾ ಕಪೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಕಾರ್ಪೋರೇಟ್ ಸಂಸ್ಥೆಯೊಂದಕ್ಕೆ ಸಾಲ ನೀಡಿರುವ ಸಂಬಂಧ ಮತ್ತು ಅವರ ಪತ್ನಿಯ ಖಾತೆಗಳಲ್ಲಿ ಲಂಚ ಆರೋಪ(ಕಿಕ್ ಬ್ಯಾಕ್) ಕೇಳಿ ಬಂದ ಹಿನ್ನೆಲೆ ಇಡಿ ಅಧಿಕಾರಿಗಳು ಕಪೂರ್ ಮನೆ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಇನ್ನೂ ಹಲವು ಅಕ್ರಮಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಷ್ಟದಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್ಎಫ್ಎಲ್) ಜೊತೆ ಯೆಸ್ ಬ್ಯಾಂಕ್ ವ್ಯವಹಾರ ನಡೆಸಿದೆ ಎಂಬ ಆರೋಪದ ಮೇಲೆ ರಾಣಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಯೆಸ್ ಬ್ಯಾಂಕ್ ಡಿಎಚ್ಎಫ್ಎಲ್ಗೆ ನೀಡಿದ ಸಾಲಗಳು ಕೆಟ್ಟ ಸಾಲಗಳಾಗಿ (NPA – ನಾನ್ ಪರ್ಫಾರ್ಮಿಂಗ್ ಅಸೆಟ್ಸ್) ಆಗಿ ಮಾರ್ಪಟ್ಟಿವೆ ಎನ್ನಲಾಗಿದೆ.