ಬೆಂಗಳೂರು; ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇಂದು 7ನೇ ಮತ್ತು ಈ ಅವಧಿಯ ಚೊಚ್ಚಲ ಬಜೆಟ್ ಮಂಡಿಸಲು ಮುಂದಾದರು. ಆದರೆ, ಅವರು ಬಜೆಟ್ ಮೇಲಿನ ಭಾಷಣ ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಎದ್ದುನಿಂತು ತಮಗೆ ಬಜೆಟ್ ಪ್ರತಿ ನೀಡಿವಂತೆ ಗದ್ದಲ ಎಬ್ಬಿಸಿರುವ ಘಟನೆ ನಡೆದಿದೆ.
ಬಜೆಟ್ ಮೇಲಿನ ಭಾಷಣ ಆರಂಭವಾಗುತ್ತಿದ್ದಂತೆ ಅದರ ಸಂಪೂರ್ಣ ಮಾಹಿತಿ ಇರುವ ಪ್ರತಿ ಸದನದ ಎಲ್ಲಾ ಸದಸ್ಯರಿಗೆ ನೀಡುವುದು ಸಂಪ್ರದಾಯ. ಆದರೆ, ಈ ಬಾರಿ ಬಿಜೆಪಿ ಬಜೆಟ್ ಮುಗಿಯುವವರಿಗೆ ಯಾರಿಗೂ ಬಜೆಟ್ ಪ್ರತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ವಿರೋಧ ಪಕ್ಷದವರು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದರು. ಅಲ್ಲದೆ, ದೊಡ್ಡ ಮಟ್ಟದಲ್ಲಿ ಗದ್ದಲ ಎಬ್ಬಿಸಿದರು.
ಇದರಿಂದಾಗಿ ಸದನದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾನವಾಯಿತು. ಈ ವೇಳೆ ಸ್ಪಷ್ಟನೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, “ಕಳೆದ ವರ್ಷ ನೀವು ಆರಂಭಿಸಿದ ಸಂಪ್ರದಾಯವನ್ನೇ ಈ ವರ್ಷ ನಾವು ಮುಂದುವರೆಸುತ್ತಿದ್ದೇವೆ” ಎಂದು ಸ್ಪಷ್ಟೀಕರಣ ನೀಡಿದರು. ಆದರೂ, ವಿರೋಧ ಪಕ್ಷಗಳ ನಾಯಕರು ಸ್ಪೀಕರ್ ಮಾತಿಗೆ ಮನ್ನಣೆ ನೀಡಿಲ್ಲ.
ಹೀಗಾಗಿ ಕೊನೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲರಿಗೂ ಬಜೆಟ್ ಪ್ರತಿ ನೀಡುವ ಭರವಸೆ ನೀಡಿದ ನಂತಹ ಬಜೆಟ್ ಮೇಲಿನ ಭಾಷಣ ಮುಂದುವರೆಯಲು ವಿರೋಧ ಪಕ್ಷಗಳು ಅನುವು ಮಾಡಿಕೊಟ್ಟಿವೆ.