ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ

ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಸಿಎಂ ಬಜೆಟ್ ಮಂಡಿಸಿದ್ದಾರೆ.

ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು. ಹಾಪ್‍ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ಕ್ರಮ. ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ.

ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.

“ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ. ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ. ರೈತ ಸಿರಿ ಯೋಜನೆಯಡಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.

ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್” ಪ್ರಾರಂಭ. ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ. ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ರಚನೆ.

ರೈತರ ಸಾಮರ್ಥ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ. ಕೃಷಿ ಮಹಾಮಂಡಳಗಳು, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್‍ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ರಮ.

ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.

ವಿಶ್ವಬ್ಯಾಂಕ್ ಅನುದಾನಿತ ಹೊಸ ಬಹು-ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಮುಂದಿನ ಆರು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಭಾಗಿ. ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲ್ಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ.

ಸಾಗರದ ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ತರಗತಿ ಪ್ರಾರಂಭಿಸಲು ಕ್ರಮ. ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹಗಳ ನಿರ್ಮಾಣ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ