ಬೆಂಗಳೂರಿನಲ್ಲಿ ಕೊರೊನಾ ಭೀತಿ: ಟೆಕ್ಕಿ ಸಂಪರ್ಕಿಸಿದ್ದ 80 ವ್ಯಕ್ತಿಗಳ ಆರೋಗ್ಯ ತಪಾಸಣೆ

ಬೆಂಗಳೂರುರಾಜಧಾನಿ ಬೆಂಗಳೂರಿಗೆ ಕಾಲಿರಿಸಿರುವ ಭಯಾನಕ ಕೊರೊನಾ ವೈರಸ್​​ಗೆ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ಮೂಲದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಾರಣಾಂತಿಕ ಕೊರೊನಾ ಪತ್ತೆಯಾದ ಹಿನ್ನೆಲೆ, ಆರೋಗ್ಯಾಧಿಕಾರಿಗಳು ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯಾಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ. ಜನವರಿ 20ರಿಂದ ಇಲ್ಲಿವರೆಗೆ ಒಟ್ಟು 34,490 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿನ 369 ಮಂದಿ 19 ಕೊರೊನಾ ಸೋಂಕಿತ ದೇಶಗಳಿಗೆ ಭೇಟಿ ಕೊಟ್ಟವರು ಎಂದು ತಿಳಿದು ಬಂದಿದೆ. ಬೆಂಗಳೂರಿನ 369 ಮಂದಿ ಪೈಕಿ 269 ಮಂದಿಯನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.

ಇನ್ನು, ಹೈದರಾಬಾದ್ ಮೂಲದ ಟೆಕ್ಕಿ ಜೊತೆ ಪ್ರಯಾಣಿಸಿದ ಮತ್ತು ಆತನ ಜೊತೆ ಇದ್ದ ಎಲ್ಲರನ್ನೂ ತಪಾಸಣೆ ಮಾಡಲಾಗುತ್ತಿದೆ. ದುಬೈನಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿನ ಸಹ ಪ್ರಯಾಣಿಕರು, ಬೆಂಗಳೂರಿನಲ್ಲಿ ಒಂದು ದಿನ ಆತ ಸಂಪರ್ಕಿಸಿದ್ದ ವ್ಯಕ್ತಿಗಳು, ಹೈದರಾಬಾದ್​​​ಗೆ ಪ್ರಯಾಣಿಸಿದ ಸಹ ಪ್ರಯಾಣಿಕರು ಎಲ್ಲರನ್ನೂ ಸಂಪರ್ಕಿಸಲಾಗಿದೆ. ಜೊತೆಗೆ ಒಂದು ದಿನ ಬೆಂಗಳೂರಿನ ಪಿಜಿಯಲ್ಲಿ ಇದ್ದವರು. ಹೀಗೆ ಒಟ್ಟು 80 ಜನರ ಪಟ್ಟಿ ತಯಾರಿಸಿ ಅವರೆಲ್ಲರನ್ನೂ ಸಂಪರ್ಕಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿ ವಿಮಾನ ಮತ್ತು ಬಸ್ ಟಿಕೆಟ್ ಮಾಹಿತಿ ಪಡೆದು ಎಲ್ಲರನ್ನೂ ಸಂಪರ್ಕಿಸಿದ್ದಾರೆ. ಈಗ ಎಲ್ಲಾ 80 ಜನರಲ್ಲಿ ಯಾರಿಗೂ ರೋಗ ಲಕ್ಷಣಗಳು ಇಲ್ಲ ಎಂಬುದು ತಿಳಿದು ಬಂದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಟೆಕ್ಕಿಯ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆಗ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಟೆಕ್ಕಿ ಕೆಲಸ ಮಾಡುವ ಕಂಪೆನಿ ಸಿಬ್ಬಂದಿ ಮತ್ತು ಮಾಲೀಕರನ್ನೂ ಸಂಪರ್ಕಿಸಿ ಅವರನ್ನೂ ಕಟ್ಟೆಚ್ಚರದಲ್ಲಿ ಇಡಲಾಗಿದೆ. ಎಲ್ಲರ ಮೇಲೆ ಮುಂದಿನ 14 ದಿನಗಳವರೆಗೆ ಗಮನ ಇರಿಸಲಾಗುವುದು.  ಇಷ್ಟರಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡುಬಂದರೆ ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್ ಮೂಲದ ಟೆಕ್ಕಿ ಫೆಬ್ರವರಿ 20ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಒಂದು ದಿನ ಬೆಂಗಳೂರಿನಲ್ಲಿ ಇದ್ದರು. 21ರಂದು ಹೈದರಾಬಾದ್ ಗೆ ತೆರಳಿದ್ದರು. 27ರಂದು ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಆತ ದುಬೈನಲ್ಲಿದ್ದ ಸಂಸ್ಥೆಯಲ್ಲಿ ಚೀನಾ ಮೂಲದ ಜನರಿದ್ದರು. ಅಲ್ಲಿಂದಲೇ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾರ್ಚ್ 2ರಂದು ರೋಗಪತ್ತೆಯಾಗಿದೆ. ಸದ್ಯ ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಆತನನ್ನು ಬೇರೆಯಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ರೋಗದ ಲಕ್ಷಣಗಳ ಬಗ್ಗೆ ಸಾಂಕ್ರಾಮಿಕ ರೋಗಗಳ ವಿಭಾಗದ  ಹಿರಿಯ ವೈದ್ಯಾಧಿಕಾರಿ ಡಾ.ಷರೀಫ್ ಮಾಹಿತಿ ನೀಡಿದ್ದಾರೆ. ರೋಗಲಕ್ಷಣ ಕಂಡರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಂಡುಬಂದರೆ  ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು. ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕ ಪ್ರದೇಶದಲ್ಲಿ ಓಡಾಡಬಾರದು. ಕಾಯಿಲೆ ಇರುವವರು ಮಾಸ್ಕ್ ಬಳಸಬೇಕು. ಮನೆಯವರ ಜೊತೆ ಸೋಂಕಿತ ಇರಬಾರದು ಎಂದು ತಿಳಿಸಿದ್ದಾರೆ.

  • ಜ್ವರ, ಶೀತ, ಕೆಮ್ಮು, ಕಫ ಆರಂಭಿಕ ಲಕ್ಷಣಗಳು.
  • ಆರಂಭದಲ್ಲಿ ಚಿಕಿತ್ಸೆ ಸಿಗದಿದ್ದರೆ ನಿಧಾನಕ್ಕೆ ಎಲ್ಲಾ ಅಂಗಗಳೂ ಕ್ಷೀಣಿಸುತ್ತಾ ಸಾವು ಉಂಟಾಗುತ್ತದೆ.
  • ಸೋಂಕು ತಗುಲಿದ 14ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
  • ಚಿಕಿತ್ಸೆ ಸಿಗದಿದ್ದರೆ 15ರಿಂದ‌ 20 ದಿನಗಳೊಳಗೆ ಸಾವು ಉಂಟಾಗುತ್ತದೆ.
  • ರೋಗಿ ಮತ್ತು ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ ಮಾಸ್ಕ್ ಧರಿಸಬೇಕು.
  • ಆರೋಗ್ಯವಾಗಿರುವವರು ಮಾಸ್ಕ್ ಧರಿಸಿಕೊಂಡ ಮಾತ್ರಕ್ಕೆ ಅವರು ಸೋಂಕಿನಿಂದ ಬಚಾವಾಗಲು ಸಾಧ್ಯವಿಲ್ಲ.
  • ಅದರಲ್ಲೂ N95 ಮಾಸ್ಕ್ ಮಾತ್ರ ತಕ್ಕಮಟ್ಟಿಗೆ ರೋಗಿಗೆ ಸಹಕಾರಿ, ಉಳಿದ ಎಲ್ಲಾ ಮಾಸ್ಕ್ ಗಳೂ ಪ್ರಯೋಜನವಿಲ್ಲ.

ಇನ್ನು, ರಾಜ್ಯದಲ್ಲಿ ಇಷ್ಟು ಆತಂಕ ಮೂಡಿಸಿರುವ ಕೊರೊನಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಐಟಿ-ಬಿಟಿ ಕಂಪನಿಗಳು ಎಚ್ಚೆತ್ತುಕೊಂಡಿಲ್ಲ. ಬಹುತೇಕ ಐಟಿ ಕಂಪೆನಿಗಳು ತಮ್ಮ ಸಿಬ್ಬಂದಿಗೆ ರೋಗಲಕ್ಷಣ, ಎಚ್ಚರಿಕೆ ಯಾವುದನ್ನೂ ನೀಡುತ್ತಿಲ್ಲ. ಕೆಲಸ ನಿಮಿತ್ತ  ವಿದೇಶಗಳಿಗೆ ಕಳಿಸುವುದನ್ನು ಬಹುತೇಕ ಬಂದ್​ ಮಾಡಲಾಗಿದೆ. ಹಲವು ದೇಶಗಳಿಗೆ ವೀಸಾ ಸಿಗುತ್ತಿಲ್ಲ, ಹಾಗಾಗಿ ವಿದೇಶಕ್ಕೆ ಹೋಗುವ ಅವಕಾಶಗಳೂ ಇಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ