ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಪವನ್ ಗುಪ್ತಾ ಶಿಕ್ಷೆಯನ್ನು ಕಡಿತಗೊಳಿಸುವಂತೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪವನ್ ಗುಪ್ತಾ ಕಳೆದ ಶುಕ್ರವಾರ ಸುಪ್ರೀಂ ಕೋರ್ಟಿನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ. ಈಗ ಈತನ ಅರ್ಜಿ ವಜಾಗೊಂಡಿದ್ದು ಕಾನೂನು ಹೋರಾಟದ ಎಲ್ಲ ಬಾಗಿಲುಗಳು ಬಂದ್ ಆಗಿದೆ.
ಕಾನೂನು ಹೋರಾಟದ ಬಾಗಿಲುಗಳು ಮುಚ್ಚಿದ್ದರೂ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಪವನ್ಗೆ ಅವಕಾಶವಿದೆ. ಉಳಿದ ನಾಲ್ವರು ದೋಷಿಗಳ ಈ ಎಲ್ಲಾ ಅರ್ಜಿಗಳು ಈಗಾಗಲೇ ತಿರಸ್ಕೃತಗೊಂಡಿದೆ.
ಮಾರ್ಚ್ 3ರಂದು ಗುಪ್ತಾ ಸೇರಿದಂತೆ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ವಾರೆಂಟ್ ನೀಡಿತ್ತು. ಈ ಆದೇಶ ಪ್ರಕಟಗೊಂಡ ಬಳಿಕ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡು ಗಾಯಮಾಡಿಕೊಂಡಿದ್ದ. ಈ ನಡುವೆ ದೋಷಿ ವಿನಯ್ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಆತನ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದರು.
ನ್ಯಾಯಾಲಯದ ಹಾದಿ ತಪ್ಪಿಸಲು ದೋಷಿಗಳು ವಿವಿಧ ನಾಟಕ ಮಾಡುತ್ತಿದ್ದಾರೆ. ಗಲ್ಲು ಶಿಕ್ಷೆ ವಿಳಂಬ ಮಾಡಲು ಅರ್ಜಿಗಳ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಎಂದು ಸಂತ್ರಸ್ತೆಯ ತಾಯಿ ಆಶಾದೇವಿ ಬೇಸರ ವ್ಯಕ್ತಪಡಿಸಿದ್ದರು.