ಎಚ್‌ಡಿಕೆಯೊಂದಿಗೆ ಮುನಿಸಿಕೊಂಡ ಮಧುಬಂಗಾರಪ್ಪ, ಮುಂದಿನ ನಡೆ ಯಾವ ಕಡೆ?

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಹೇಳುವ ಮೂಲಕ ಪಕ್ಷದ ಕುರಿತಾಗಿ ಜೆಡಿಎಸ್‌ ಮುಖಂಡ ಮಧುಬಂಗಾರಪ್ಪ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಲೋಕಸಭಾ ಚುನಾವಣಾ ಸೋಲಿನ ಬಳಿಕ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದ ಮಧುಬಂಗಾರಪ್ಪ, ಇದೀಗ ಜೆಡಿಎಸ್‌ ಕುರಿತಾಗಿ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿಯಾಗಿದ್ದು, ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆ, ಅವರು ಯಾರೆಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಹೆಚ್.ವಿಶ್ವನಾಥ್ ಜೆಡಿಎಸ್ ಬಿಡುವಾಗ ಹಿಂದಿನ ದಿನ ನಾನು ಅವರೊಂದಿಗೆ ಇದ್ದೆ. ವಿಶ್ವನಾಥ್ ಅವರನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದೆ.

ವಿಶ್ವನಾಥ್ ಅವರಿಗೆ ಪಕ್ಷ ಬಿಡುವ ಸಂದರ್ಭ ಯಾಕಾಗಿ ಬಂತು ಎಂಬುವುದು ಗೊತ್ತಿಲ್ಲ. ವಿಶ್ವನಾಥ್ ಹಾಗೂ ಕುಮಾರಸ್ವಾಮಿ ನಡುವೆ ತಂದಿಡುವ ಪ್ರಯತ್ನವನ್ನು ಕೆಲವರು ಮಾಡಿದ್ದರು ಎಂದು ಆರೋಪಿಸಿದರು.

ಜೆಡಿಎಸ್‌ ನಾಯಕರನ್ನು ಸೃಷ್ಟಿ ಮಾಡುವ ಪಕ್ಷ‌, ಆದರೆ ಆ ನಾಯಕರನ್ನು ಉಳಿಸಿಕೊಳ್ಳಬೇಕು. ನಾಯಕರ‌ನ್ನು‌ ಹೀಗೆ ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯುತ್ತಾ ಎಂದು ಪ್ರಶ್ನಿಸಿದರು.

ವಿಧಾನಪರಿಷತ್‌ ಸ್ಥಾನವನ್ನು ರಮೇಶ್‌ ಗೌಡನಂತಹ ಕ್ರಿಮಿನಲ್‌ಗೆ ಕೊಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಮಧುಬಂಗಾರಪ್ಪ, ಮೈತ್ರಿ ಸರ್ಕಾರದಲ್ಲಿ ಮಂತ್ರಿಗಳಾಗಿ ಅಧಿಕಾರ ಪಡೆದವರು ಕಾರ್ಯಕರ್ತರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ, ಹೀಗಾಗಿ ಮತ್ತೆ ಕಾರ್ಯಕರ್ತರ ವಿಶ್ವಾಸವನ್ನು ಪಡೆದುಕೊಳ್ಳುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಸಕ್ರಿಯವಲ್ಲ ಪಕ್ಷ ಜೆಡಿಎಸ್‌ನ ನಾಯಕ ಮಾತ್ರ, ರಾಜಕೀಯವಾಗಿ ನನಗೆ ಬೆಳೆಯಲು ಆಸೆಯಿದೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಮುಂದಿನ ಹಾದಿಯ ಕುರಿತಾಗಿ ಕುತೂಹಲ ಸೃಷ್ಟಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ