ಬಜೆಟ್ ಅಧಿವೇಶನ: ಕಲಾಪದಲ್ಲಿ ಯತ್ನಾಳ್ ಹೇಳಿಕೆ ಗದ್ದಲ, ಸದನದ ಬಾವಿಗಿಳಿದು ಪ್ರತಿಪಕ್ಷಗಳಿಂದ ಪ್ರತಿಭಟನೆ

ಬೆಂಗಳೂರುಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಕುರಿತಾಗಿ ವಿವಾದಾತ್ಮಕ ಹೇಳಿಕ ನೀಡಿದ್ದ ಬಿಜೆಪಿ ಶಾಸಕ ಬಸನಗೊಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸದನದ ಬಾವಿಗಿಳಿದ ಕಾಂಗ್ರೆಸ್ ನಾಯಕರು, ಪ್ರತಿಭಟನೆ ನಡೆಸುತ್ತಿದ್ದಾರೆ.

ಅಗಲಿದ ಗಣ್ಯರಿಗೆ ಸಂತಾಪ ನಿರ್ಣಯ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಆದರೆ, ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವಕಾಶ ನೀಡಲಿಲ್ಲ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಪ್ರಶ್ನೆಗೆ ಉತ್ತರ ನೀಡಿದ ಬಳಿಕ ಅವಕಾಶ ನೀಡುವುದಾಗಿ ತಿಳಿಸಿದರು.

ಆದರೆ, ವಿಚಾರ ಪ್ರಸ್ತಾಪಕ್ಕೆ ಸ್ಪೀಕರ್ ವಿಶೇಷಾಧಿಕಾರ ಬಳಸಿ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದರು. ಇದಕ್ಕೆ ಅವಕಾಶ ನೀಡದೆ ರಾಜ್ಯಪಾಲರ ಭಾಷಣದ ಮೇಲಿನ ಪ್ರಶ್ನೆಗೆ ಉತ್ತರ ನೀಡಲು ಮುಖ್ಯಮಂತ್ರಿಗಳು ಮುಂದಾಗುತ್ತಿದ್ದಂತೆಯೇ ಪ್ರತಿಪಕ್ಷಗಲು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿವೆ.

ರಾಜ್ಯ ಸರ್ಕಾರ ಹಾಗೂ ಶಾಸಕ ಯತ್ನಾಳ್ ವಿರುದ್ಧ ಘೋಷಣೆ ಕೂಗುತ್ತಿರುವ ಕಾಂಗ್ರೆಸ್ ನಾಯಕರು ಸಂವಿಧಾನವನ್ನು ರಕ್ಷಿಸಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿ.ಚೆನ್ನಿಗಪ್ಪ, ಚತುರ್ವೇದಿ, .ಶೆಟ್ಟರ್ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ: ಮೃತರ ಸಾಧನೆ ಸ್ಮರಣೆ
ಇತ್ತೀಚೆಗೆ ನಿಧನರಾದ ಇತಿಹಾಸಕಾರ ಮಾಜಿ ಸಚಿವ ಸಿ.ಚೆನ್ನಿಗಪ್ಪ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ ಚತುರ್ವೇದಿ ಹಾಗೂ ಇತಿಹಾಸಕಾರ ಷ.ಶೆಟ್ಟರ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು.ಸದನಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಿಸಲಾಯಿತು. ಸದನ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

ಆರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸಿ.ಚನ್ನಿಗಪ್ಪ ಅವರು ಕೊರಟಗೆರೆ ಕ್ಷೇತ್ರದಿಂದ 3 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಧರ್ಮಸಿಂಗ್ ಅವರ ಸಂಪುಟದಲ್ಲಿ, ಕುಮಾರಸ್ವಾಮಿ ಅವರ ಸಂಪುಟದಲ್ಲಿ ರೇಷ್ಮೆ, ಅರಣ್ಯ, ಭೂ ವಿಜ್ಞಾನ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದ ಅವರು ರಾಜಕೀಯದಲ್ಲಿ ಅಪಾರ ಸೇವೆ ಮಾಡಿದ್ದಾರೆ. ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ದಯಾಪಾಲಿಸಲಿ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಸುಧಾಕರ ಚತುರ್ವೇದಿಯವರು ಜಲಿಯನ್‌ ವಾಲಾ ಬಾಗ್ ದುರಂತಕ್ಕೆ ಸಾಕ್ಷಿಯಾಗಿದ್ದರು. ದೇಶಕ್ಕಾಗಿ ಹುತಾತ್ಮರಾದವರ ಅಂತಿಮ ಸಂಸ್ಕಾರವನ್ನು ಕೂಡ ಸ್ವತ ಅವರೇ ನೆರವೇರಿಸಿದ್ದರು. ಮಹಾತ್ಮ ಗಾಂಧಿ ತಪ್ಪು ಹೆಜ್ಜೆ ಇಟ್ಟಾಗ ಅದನ್ನು ಪ್ರಶ್ನಿಸುವ ನೈತಿಕತೆಯನ್ನು ಬೆಳೆಸಿಕೊಂಡಿದ್ದರು. ವೇದಾಂತಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು ಎಂದು ಸ್ಮರಿಸಿದರು.

ಸಂಶೋಧಕ ಷ. ಶೆಟ್ಟರ್ ಅವರು ಖ್ಯಾತ ಇತಿಹಾಸಕಾರರಾಗಿದ್ದರು. ಹಳಗನ್ನಡದ ಮೇಲೆ ವಿಶೇಷ ಸಂಶೋಧನೆ ನಡೆಸಿದ್ದರು. ಕನ್ನಡ ಭಾಷೆಯ ಪ್ರಾಚೀನತೆ ಬಗ್ಗೆ ಸಂಶೋಧನೆ ನಡೆಸಿ ಹೊಸ ಬೆಳಕು ಚೆಲ್ಲಿದ್ದರು.  ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಅವರ ಪಾತ್ರ ಅಪಾರವಾದುದು. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂಬುದನ್ನು ನಿರೂಪಿಸಿದ್ದರು.  ಈ ಮೂವರು ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಕುಟುಂಬಕ್ಕೆ ಅವರ ನಿಧನದ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ