ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯವನ್ನು ಭರ್ಜರಿ ಅಂತರದಿಂದ ಗೆದ್ದ ಆಸ್ಟ್ರೇಲಿಯಾ ಸರಣಿಯನ್ನು 2-1 ಅಂತರದಿಂದ ಗೆಲುವು ಕಂಡಿದೆ.
ಇಲ್ಲಿನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಆಸೀಸ್ ಆರಂಭಿಕರು ಮೊದಲ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು. ಡೇವಿಡ್ ವಾರ್ನರ್ 57 ರನ್ ಗಳಿಸಿದರೆ, ನಾಯಕ ಆರೋನ್ ಫಿಂಚ್ 55 ರನ್ ಗಳಿಸಿದರು. ಸ್ಮಿತ್ 30 ರನ್ ಗಳಿಸಿದರು. ಆಸೀಸ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.
ಗುರಿ ಬೆನ್ನತ್ತಿದ ಹರಿಣಗಳು ಆಸೀಸ್ ಬೌಲಿಂಗ್ ದಾಳಿಗೆ ನಡುಗಿ ಕೇವಲ 96 ರನ್ ಗೆ ಆಲ್ ಔಟ್ ಆಯಿತು. ರಸ್ಸೀ ವಾನ್ ಡರ್ ಡ್ಯುಸೆನ್ 24 ರನ್ ಗಳಿಸಿದ್ದೇ ಅತೀ ಹೆಚ್ಚು ರನ್. ಆಸ್ಟನ್ ಅಗರ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಮೂರು ವಿಕೆಟ್ ಪಡೆದರು. ಇದರೊಂದಿಗೆ ದಕ್ಷಿಣ ಆಫ್ರಿಕಾ 97 ರನ್ ಅಂತರದ ಭಾರಿ ಸೋಲನುಭವಿಸಿತು.
ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಆರೋನ್ ಫಿಂಚ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.