ದೆಹಲಿ ಹಿಂಸಾಚಾರ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ಜಸ್ಟಿಸ್ ಎಸ್. ಮುರಳೀಧರ್ ವರ್ಗಾವಣೆ

ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಎಸ್. ಮುರಳೀಧರ್ ಅವರು ಬುಧವಾರ (ಫೆಬ್ರವರಿ 26, 2020) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದಾರೆ. ಆದಾಗ್ಯೂ, ಈಶಾನ್ಯ ದೆಹಲಿಯಲ್ಲಿ ಗಲಭೆಗಳು ಸಂಭವಿಸುವ ಹಲವು ದಿನಗಳ ಮೊದಲು (ಫೆಬ್ರವರಿ 12) ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು ಶಿಫಾರಸು ಮಾಡಿದ್ದರಿಂದ ಇದು ವಾಡಿಕೆಯ ವರ್ಗಾವಣೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೊಂದಿಗೆ ಸಮಾಲೋಚಿಸಿದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್,  ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ವರ್ಗಾಯಿಸಿದ್ದಾರೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಫೆಬ್ರವರಿ 12 ರಂದು ನಡೆದ ಸಭೆಯಲ್ಲಿ ನ್ಯಾಯಮೂರ್ತಿ ಮುರಳೀಧರ್ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾಯಿಸಲು ಉನ್ನತ ನ್ಯಾಯಾಲಯದ ಕೊಲೆಜಿಯಂ ಶಿಫಾರಸು ಮಾಡಿತ್ತು. ದಿಲ್ಲಿ ಹೈಕೋರ್ಟಿನ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಹಾಗೂ ದಿಟ್ಟ ತೀರ್ಪುಗಳನ್ನು ನೀಡುವವರೆಂದು ಜಸ್ಟಿಸ್ ಎಸ್ . ಮುರಳೀಧರ್ ಖ್ಯಾತರಾಗಿದ್ದರು.

ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ​​(ಡಿಎಚ್‌ಸಿಬಿಎ) ನ್ಯಾಯಾಧೀಶರ ವರ್ಗಾವಣೆ ಪ್ರಸ್ತಾಪವನ್ನು ಈ ಹಿಂದೆಯೇ  ಖಂಡಿಸಿತ್ತು . ಇದೀಗ ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿಂದ  ಅತ್ಯುತ್ತಮ ನ್ಯಾಯಾಧೀಶರೊಬ್ಬರ ವರ್ಗಾವಣೆಗೊಂಡಿದ್ದಾರೆ ಎಂದು ಬಾರ್ ಅಸೋಸಿಯೇಷನ್ ​​ ಬೇಸರ ವ್ಯಕ್ತಪಡಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ