ನವದೆಹಲಿ: ಮುಂದಿನ ಏಪ್ರಿಲ್‌ನಲ್ಲಿ ಸದಸ್ಯರ ಅವಧಿ ಕೊನೆಗೊಳ್ಳುವ 17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಮಂಗಳವಾರ ಚುನಾವಣಾ ದಿನಾಂಕ ಪ್ರಕಟಿಸಿದೆ.
ಎಲ್ಲ 55 ಸ್ಥಾನಗಳಿಗೆ ಮಾರ್ಚ್ 26 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣೆಗೆ ಮಾರ್ಚ್ 6 ರಂದು ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 13ರಂದು ಕೊನೆಯ ದಿನಾಂಕವಾಗಿದೆ. ಮಾರ್ಚ್ 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 18 ರಂದು ಕೊನೆಯ ದಿನಾಂಕವಾಗಿದೆ.
ಏಪ್ರಿಲ್ 2 ಕ್ಕೆ ಮಹಾರಾಷ್ಟ್ರದಲ್ಲಿ ಏಳು, ಒಡಿಶಾದಲ್ಲಿ ನಾಲ್ಕು, ತಮಿಳುನಾಡಿನಲ್ಲಿ ಆರು ಮತ್ತು ಪಶ್ಚಿಮ ಬಂಗಾಳದಲ್ಲಿ ಐದು ಸ್ಥಾನಗಳು ತೆರವಾಗಲಿವೆ. ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ ನಾಲ್ಕು ಸ್ಥಾನಗಳು, ತೆಲಂಗಾಣ, ಹರಿಯಾಣ, ಜಾರ್ಖಂಡ್ ಮತ್ತು ಚತ್ತೀಸ್‌ಗಢದಲ್ಲಿ ತಲಾ ಎರಡು, ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ತಲಾ ಮೂರು, ಬಿಹಾರದಲ್ಲಿ ಐದು ಹಾಗೂ ಮಣಿಪುರ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಂದು ಸ್ಥಾನಗಳ ಅವಧಿ ಏಪ್ರಿಲ್ 9 ಕ್ಕೆ ಕೊನೆಗೊಳ್ಳಲಿದೆ. ಮೇಘಾಲಯದಲ್ಲಿ ಒಂದು ಸ್ಥಾನದ ಅವಧಿ ಏಪ್ರಿಲ್ 12 ರಂದು ಕೊನೆಗೊಳ್ಳಲಿದೆ.
ಕಾಂಗ್ರೆಸ್ ನ ಹಿರಿಯ ಮುಖಂಡರಾದ ದಿಗ್ವಿಜಯ ಸಿಂಗ್ (ಮಧ್ಯಪ್ರದೇಶ), ಮೋತಿಲಾಲ್ ವೊರಾ (ಚತ್ತೀಸ್‌ಗಢ), ಕುಮಾರಿ ಶೆಲ್ಜಾ (ಹರಿಯಾಣ) ವಿಪ್ಲವ್ ಠಾಕೂರ್ (ಹಿಮಾಚಲ ಪ್ರದೇಶ), ಮಧುಸೂದನ್ ಮಿಸ್ತ್ರಿ (ಗುಜರಾತ್) ಮತ್ತು ಕೇಂದ್ರ ಸಚಿವ ರಾಮದಾಸ್ ಅಥಾವಳೆ (ಮಹಾರಾಷ್ಟ್ರ), ಕೈಗಾರಿಕೋದ್ಯಮಿ ಪರಿಮಾಲ್ ನಾಥ್ವಾನಿ (ಜಾರ್ಖಂಡ್), ಬಿಜೆಪಿಯ ವಿಜಯ್ ಗೋಯಲ್ (ರಾಜಸ್ಥಾನ) ಹಾಗೂ ಡಿಎಂಕೆಯ ತಿರುಚಿ ಶಿವ ಅವರ ರಾಜ್ಯಸಭಾ ಅವಧಿ ಏಪ್ರಿಲ್ ನಲ್ಲಿ ಕೊನೆಗೊಳ್ಳಲಿದೆ.