ದೆಹಲಿಯ ಮತ್ತೆ ಭುಗಿಲೆದ್ದ ಹಿಂಸಾಚಾರ: ಕಲ್ಲು ತೂರಾಟ, ಮೃತರ ಸಂಖ್ಯೆ 7ಕ್ಕೇರಿಕೆ, ಸಭೆ ಕರೆದ ಗೃಹ ಸಚಿವ ಅಮಿತ್ ಶಾ 

ನವದೆಹಲಿ:ದೆಹಲಿಯ ಈಶಾನ್ಯ ಭಾಗದ ಜಫ್ರಾಬಾದ್, ಬ್ರಹಂಪುರಿ ಪ್ರದೇಶಗಳಲ್ಲಿ ಮಂಗಳವಾರ ಮತ್ತೆ ಕಲ್ಲು ತೂರಾಟ, ಗಲಭೆ ನಡೆದ ಘಟನೆ ವರದಿಯಾಗಿದೆ.

ಕಳೆದ ಭಾನುವಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ನಡೆದ ಗಲಭೆಯಲ್ಲಿ ನಿನ್ನೆ ನಾಲ್ವರು ನಾಗರಿಕರು ಮತ್ತು ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿ ಐವರು ಮೃತಪಟ್ಟಿದ್ದರು.105 ಮಂದಿ ಗಾಯಗೊಂಡಿದ್ದರು. ಇಂದು ಮತ್ತೆ ಅದೇ ಪ್ರದೇಶದಲ್ಲಿ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ.

ಘಟನೆ ಕುರಿತು ಕಳೆದ ರಾತ್ರಿ ಕೂಡ ಅವರು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

ಸದ್ಯ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಈಶಾನ್ಯ ದೆಹಲಿಯಿಂದ ತಮಗೆ ನಿರಂತರವಾಗಿ ಹಿಂಸಾಚಾರದ ಬಗ್ಗೆ ಕರೆಗಳು ಬರುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಮೃತರ ಸಂಖ್ಯೆ 7ಕ್ಕೆ ಏರಿಕೆ:ಈ ಮಧ್ಯೆ ನಿನ್ನೆಯ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಮೃತಪಟ್ಟಿದ್ದು, ಮಡಿದವರ ಸಂಖ್ಯೆ 7ಕ್ಕೇರಿದೆ.

ಅಮಿತ್ ಶಾ ಸಭೆ: ಇದೀಗ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಪರಿಸ್ಥಿತಿ ಪರಾಮರ್ಶೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ಆರಂಭವಾಗಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆ.ಗವರ್ನರ್ ಅನಿಲ್ ಬೈಜಾಲ್, ದೆಹಲಿ ಪೊಲೀಸ್ ಆಯುಕ್ತೆ ಅಮೂಲ್ಯ ಪಾಟ್ನೈಕ್, ಕಾಂಗ್ರೆಸ್ ನಾಯಕ ಸುಭಾಷ್ ಚೋಪ್ರಾ, ಬಿಜೆಪಿ ನಾಯಕರಾದ ಮನೋಜ್ ತಿವಾರಿ, ರಂಬೀರ್ ಸಿಂಗ್ ಬಿಧುರಿ ಮೊದಲಾದವರು ಭಾಗವಹಿಸಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ