ಟ್ರಂಪ್ ಭಾರತ ಭೇಟಿ: 8-10 ರಕ್ಷಣಾ ಒಪ್ಪಂದಗಳಿಗೆ ಅಂಕಿತ ಬೀಳುವ ನಿರೀಕ್ಷೆ

ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕ ಜೊತೆ ಭಾರತದ ರಕ್ಷಣಾ ಸಂಬಂಧ ಬಲಗೊಳ್ಳುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಎರಡೂ ದೇಶಗಳು ಕೆಲ ಪ್ರಮುಖ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ 8-10 ಒಪ್ಪಂದಗಳಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಇವೆಲ್ಲವೂ ಅಂತಿಮ ಹಂತದ ಮಾತುಕತೆಯಲ್ಲಿವೆ.

ಇವತ್ತು ಅಥವಾ ನಾಳೆ ಇವುಗಳಿಗೆ ಮುಕ್ತಿ ಸಿಗಲಿದೆ. ಇದು ನೆರವೇರಿದರೆ ಸುಮಾರು 10 ಬಿಲಿಯನ್ ಡಾಲರ್ (ಸುಮಾರು 70 ಸಾವಿರ ಕೋಟಿ ರೂ) ನಷ್ಟು ಮೌಲ್ಯದ ರಕ್ಷಣಾ ಆಯುಧಗಳು ಭಾರತದ ಬತ್ತಳಿಕೆ ಸೇರಲಿವೆ.

795 ಮಿಲಿಯನ್ ಡಾಲರ್ (ಸಮಾರು 5,700 ಕೋಟಿ ರೂ) ಮೌಲ್ಯದ 6 AH64E ಅಪಾಚೆ ಆಕ್ರಮಣಕಾರಿ ಹೆಲಿಕಾಪ್ಟರ್​ಗಳ ಖರೀದಿ ಒಪ್ಪಂದ. ಇದೂ ಕೂಡ ಮಾತುಕತೆಯ ಅಂತಿಮ ಹಂತದಲ್ಲಿದೆ.

ಎಫ್21 ಫೈಟರ್ ವಿಮಾನಗಳ ಹಾಗೂ ಗಾರ್ಡಿಯನ್​ಗಳ ಮಾರಾಟಕ್ಕೆ ಅಮೆರಿಕದವರು ಯತ್ನಿಸುವ ಸಾಧ್ಯತೆ ಇದೆ.

ಗಾರ್ಡಿಯನ್ ಡ್ರೋನ್​ಗಳು ಅಮೆರಿಕದ ವಿಶೇಷ ಶಸ್ತ್ರಗಳಾಗಿವೆ. NATOದಲ್ಲಿರುವ ದೇಶಗಳಿಗೆ ಮಾತ್ರ ಅಮೆರಿಕ ಈ ಶಸ್ತ್ರ ಸಜ್ಜಿತ ಡ್ರೋನ್​ಗಳನ್ನು ನೀಡಿದೆ. NATO ಆಚೆ ಈ ಡ್ರೋನ್ ಪಡೆಯುವ ಮೊದಲ ದೇಶವಾಗಲಿದೆ ಭಾರತ. ಇದು ಭಾರತದ ಜೊತೆ ಅಮೆರಿಕ ಮುಂದಿನ ದಿನಗಳಲ್ಲಿ ಮಾಡಿಕೊಳ್ಳಲಿರುವ ವಿಶೇಷ ಬಾಂಧವ್ಯದ ಕುರುಹು ಎಂದು ಭಾವಿಸಲಾಗಿದೆ. ಭಾರತ ಮತ್ತು ಅಮೆರಿಕ ಈಗಾಗಲೇ ಹಲವು ಬಾರಿ ಜಂಟಿಯಾಗಿ ಸಮರಾಭ್ಯಾಸ ಮಾಡುತ್ತಲೇ ಬಂದಿವೆ.

ಏಷ್ಯಾ ವಲಯದಲ್ಲಿ ವಿವಿಧ ರಾಷ್ಟ್ರಗಳು ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚೆಚ್ಚು ಬಂಡವಾಳ ಹೂಡುತ್ತಿವೆ. ಈ ಹಂತದಲ್ಲಿ ಭಾರತ ಹೆಚ್ಚು ಸುರಕ್ಷಿತವಾಗಿರಬೇಕೆಂದು ಅಮೆರಿಕ ಬಯಸುತ್ತದೆ ಎಂದು ಅಮೆರಿಕದ ಮಾಜಿ ರಾಯಭಾರಿ ಟಿಮ್ ರೂಮರ್ ವಾದ ಮುಂದಿಟ್ಟಿದ್ದಾರೆ.

ಭಾರತದ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ಹೊಸ ಶಸ್ತ್ರಾಸ್ತ್ರ ಖರೀದಿ ಮತ್ತು ತಯಾರಿಯ ಭರಾಟೆಯಲ್ಲಿವೆ. ಚೀನಾದಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯಬಲ್ಲ ಶಸ್ತ್ರಗಳಿವೆ. ಚೀನಾದ ಮೂಲಕ ಪಾಕಿಸ್ತಾನವೂ ಸಾಕಷ್ಟು ಅಸ್ತ್ರ, ಶಸ್ತ್ರಗಳನ್ನು ಪಡೆದುಕೊಳ್ಳುತ್ತಿದೆ.

ಡೊನಾಲ್ಡ್ ಟ್ರಂಪ್ ಅವರು ನಾಳೆ, ಮಂಗಳವಾರ ರಾತ್ರಿ ಅಮೆರಿಕಕ್ಕೆ ವಾಪಸ್ ತೆರಳಲಿದ್ದಾರೆ. ಮಂಗಳವಾರ ಮಧ್ಯಾಹ್ನ ದೆಹಲಿಯಲ್ಲಿ ಈ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ