ಮಂಗಳೂರು: ಉಡುಪಿ ಮೂಲದ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಬಿ.ಆರ್. ಶೆಟ್ಟಿ ಈಗ ಸಂಕಷ್ಟದಲ್ಲಿದ್ದಾರೆ. ಕನ್ನಡಿಗರಾಗಿರುವ ಬಿ.ಆರ್. ಶೆಟ್ಟಿ ದುಬೈನಲ್ಲಿ ನೆಲೆಸಿ ತಮ್ಮದೇ ಆದ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದರು. ಅಬುಧಾಬಿಯಲ್ಲಿ ಎನ್ಎಂಸಿ ಹೆಲ್ತ್ ಎಂಬ ಕಂಪನಿ ಆರಂಭಿಸಿದ್ದ ಬಿ.ಆರ್. ಶೆಟ್ಟಿ ಕಂಪನಿಯ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿ.ಆರ್. ಶೆಟ್ಟಿ ಸಮೂಹ ಸಂಸ್ಥೆಗಳ ಷೇರು ಮಾರುಕಟ್ಟೆ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಬಿ.ಆರ್. ಶೆಟ್ಟಿ ಎನ್ಎಂಸಿ ಹೆಲ್ತ್ ಸಂಸ್ಥೆಯ ವ್ಯವಸ್ಥಾಪಕ ಮಂಡಳಿಗೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 11,460 ಕೋಟಿ ( 1.6 ಬಿಲಿಯನ್ ಡಾಲರ್) ಮೌಲ್ಯದ ಆಸ್ತಿ ಹೊಂದಿರುವ ಬಿ.ಆರ್. ಶೆಟ್ಟಿಯವರ ಅಬುಧಾಬಿ ಮೂಲದ ಎನ್ಎಂಸಿ ಹೆಲ್ತ್ ಸಂಸ್ಥೆಯ ಷೇರು ವಹಿವಾಟು ಕಳೆದ ಡಿಸೆಂಬರ್ನಿಂದೀಚೆಗೆ ಶೇ. 70ರಷ್ಟು ಕುಸಿತ ಕಂಡಿತ್ತು.
ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾಗೂ ಷೇರಿನ ಮೌಲ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಎನ್ಎಂಸಿ ಹೆಲ್ತ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿ.ಆರ್. ಶೆಟ್ಟಿಗೆ ಆಡಳಿತ ಮಂಡಳಿ ಸದಸ್ಯರು ಒತ್ತಾಯಿಸಿದ್ದರು. ಕೆಲವು ದಿನಗಳ ಹಿಂದೆ ಎನ್ಎಂಸಿ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಇನ್ನೂ ಮೂವರು ರಾಜೀನಾಮೆ ಸಲ್ಲಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಿ.ಆರ್. ಶೆಟ್ಟಿ ಅವರ ಎನ್ಎಂಸಿ ಹೆಲ್ತ್ ಸಂಸ್ಥೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಮಡ್ಡಿ ವಾಟರ್ಸ್ ಕಳೆದ ವರ್ಷವೇ ವರದಿ ಮಾಡಿತ್ತು. ಇದಾದ ನಂತರ ಶೆಟ್ಟಿಯವರ ಸಂಸ್ಥೆಯ ಷೇರುಗಳ ಮೊತ್ತ ಇನ್ನಷ್ಟು ಕುಸಿತ ಕಂಡಿತ್ತು. ಸಾಲ ಪಡೆಯಲು ಎನ್ಎಂಪಿ ಹೆಲ್ತ್ ಸಂಸ್ಥೆಯ ಷೇರುಗಳನ್ನು ಬ್ಯಾಂಕ್ಗಳಲ್ಲಿ ಅಡ ಇಡಲಾಗಿದೆ. ಈ ವಿಚಾರವನ್ನು ಮುಚ್ಚಿಡಲಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿತ್ತು.
ಅನಿವಾಸಿ ಕನ್ನಡಿಗ ಬಿ.ಆರ್. ಶೆಟ್ಟಿಯವರ ಆಪ್ತ ಮೂಲಗಳ ಪ್ರಕಾರ, ಎನ್ಎಂಸಿ ಹೆಲ್ತ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಖುದ್ದು ಬಿ.ಆರ್. ಶೆಟ್ಟಿಯವರೇ ಎಫ್ಬಿಐ ಮಾಜಿ ನಿರ್ದೇಶಕರೊಬ್ಬರನ್ನು ನೇಮಕ ಮಾಡಿದ್ದರು. ಮಡ್ಡಿ ವಾಟರ್ಸ್ ಈ ಹಿಂದೆ ಕೂಡ ಟೆಸ್ಲಾ ಸೇರಿದಂತೆ ಹಲವು ಸಂಸ್ಥೆಗಳ ವಿರುದ್ಧ ಇದೇ ರೀತಿಯ ಆಧಾರರಹಿತ ಆರೋಪಗಳನ್ನು ಮಾಡಿತ್ತು. ಇದೇ ಕಾರಣಕ್ಕೆ ಸೂಕ್ತ ತನಿಖೆಯಾಗಿ, ತಾನು ನಿರಪರಾಧಿ ಎಂದು ಗೊತ್ತಾಗುವವರೆಗೂ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ದೂರ ಉಳಿಯಲು ಬಿ.ಆರ್. ಶೆಟ್ಟಿ ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
1973ರಲ್ಲಿ ಉಡುಪಿಯಿಂದ ಯುಎಇ ಗೆ ತೆರಳಿದ ಬಿ.ರಘುರಾಮ ಶೆಟ್ಟಿ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ವಿಶ್ವದ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾಗಲು ಅವರು ಸವೆಸಿದ ಹಾದಿ ಸುಲಭದ್ದಾಗಿರಲಿಲ್ಲ. ಯುಎಇಯ ಅತಿದೊಡ್ಡ ಆಸ್ಪತ್ರೆಯಲ್ಲಿ ಒಂದಾದ ಎನ್ಎಂಸಿ ಹೆಲ್ತ್ ಅನ್ನು ಸ್ಥಾಪಿಸಿದ ಬಿ.ಆರ್. ಶೆಟ್ಟಿ ವಿಶ್ವದ ಬಿಲಿಯನೇರ್ಗಳಲ್ಲಿ ಒಬ್ಬರು. ಸಿಂಡಿಕೇಟ್ ಬ್ಯಾಂಕ್ನ ಮಾಜಿ ಚೇರ್ಮನ್ ಅವರಿಂದ ಸಣ್ಣ ಮೊತ್ತದ ಸಾಲ ಪಡೆದಿದ್ದ ಬಿ.ಆರ್. ಶೆಟ್ಟಿ ಆ ಹಣದಲ್ಲಿ ತಮ್ಮ ತಂಗಿಯ ಮದುವೆ ಮಾಡಿದ್ದರು. ಬಡತನದ ಹಿನ್ನೆಲೆಯಿಂದ ಬಂದ ಬಿ.ಆರ್. ಶೆಟ್ಟಿ ಬಳಿ ಈಗ ಪ್ರೈವೇಟ್ ಜೆಟ್, ದುಬೈ ಹಾಗೂ ಮಂಗಳೂರಿನಲ್ಲಿ ಐಷಾರಾಮಿ ಬಂಗಲೆಗಳು, ವಿಂಟೇಜ್ ಕಾರುಗಳ ದೊಡ್ಡ ಸಂಗ್ರಹವೇ ಇದೆ.