ಜೈಲಿನ ಗೋಡೆಗೆ ತಲೆ ಹೊಡೆದುಕೊಂಡ ನಿರ್ಭಯಾ ಅಪರಾಧಿ ವಿನಯ್ ಶರ್ಮಾ; ನೇಣು ತಪ್ಪಿಸಲು ಹೊಸ ನಾಟಕ?

ಹೊಸದಿಲ್ಲಿ: ದಿಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ಜೈಲಿನಲ್ಲಿ ಗೋಡೆಗೆ ತಲೆ ಹೊಡೆದುಕೊಂಡು ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

ತಿಹಾರ್ ಜೈಲಿನ ಮೂಲಗಳ ಮಾಹಿತಿಯ ಪ್ರಕಾರ ಕಳೆದ ಭಾನುವಾರ (ಫೆ.16) ರಂದು ಜೈಲಿನ ಗೋಡೆಗಳಿಗೆ ತಲೆಯನ್ನು ಹೊಡೆದುಕೊಂಡಿದ್ದಾನೆ. ನಂತರ ಜೈಲು ಸಿಬ್ಬಂದಿ ಈತನ ಕೃತ್ಯವನ್ನು ತಡೆದಿದ್ದಾರೆ ಎನ್ನಲಾಗಿದೆ. ವಿನಯ್ ಶರ್ಮಾಗೆ ಅಲ್ಪ ಪ್ರಮಾಣದ ಗಾಯಗಳಾಗಿದೆ ಎನ್ನಲಾಗಿದೆ.

ಡೆತ್ ವಾರಂಟ್ ಜಾರಿಯಾಗಿರುವ ನಿರ್ಭಯಾ ಅಪರಾಧಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ಜೈಲಿನ ಗೋಡೆಗಳಿಗೆ ತಲೆಯಿಂದ ಹೊಡೆದುಕೊಂಡು ತನಗೆ ತಾನೆ ಗಾಯ ಮಾಡಿಕೊಂಡಿದ್ದಾನೆ ಎಂದು ತಿಹಾರ್ ಜೈಲಿನ ಸಿಬ್ಬಂದಿಯೋರ್ವರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ವಿನಯ್ ಶರ್ಮಾ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾನೆ ಎಂದು ಆತನ ವಕೀಲರು ಈ ವಾರದ ಆರಂಭದಲ್ಲಿ ಕೋರ್ಟ್ ಗೆ ತಿಳಿಸಿದ್ದರು.

ವಿನಯ್ ಗೆ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ. ಆತ ಗಾಯಗೊಂಡಿದ್ದಾನೆ. ಮತ್ತು ಆತ ಮಾನಸಿಕ ಖಾಯಿಲೆಯಿಂದಲೂ ಗಾಯಗೊಂಡಿದ್ದಾನೆ. ಹಾಗಾಗಿ ಡೆತ್ ವಾರಂಟ್ ರದ್ದು ಮಾಡಬೇಕು ಎಂದು ವಿನಯ್ ಶರ್ಮಾ ಪರ ವಕೀಲರು ಹೇಳಿದ್ದರು. ಇದರ ಬಳಿಕ ವಿನಯ್ ಶರ್ಮಾನನ್ನು ಸರಿಯಾಗಿ ನೋಡಿಕೊಳ್ಳುವಂತೆ ತಿಹಾರ್ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶಿಸಿತ್ತು.

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದಿಲ್ಲಿ ಕೋರ್ಟ್ ಮಾರ್ಚ್ ಮೂರರಂದು ಗಲ್ಲು ಶಿಕ್ಷೆ ನೀಡಬೇಕೆಂದು ಡೆತ್ ವಾರಂಟ್ ಹೊರಡಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ