ಬೆಂಗಳೂರು: ಇಂದು ಯಾವುದೇ ವಿವಾದ, ಪ್ರತಿಭಟನೆಗೆ ಎಡೆಯಾಗದಂತೆ ವಿಧಾನಮಂಡಲ ಜಂಟಿ ಅಧಿವೇಶನ ಪ್ರಾರಂಭಗೊಂಡಿತು. ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ರಾಜ್ಯಪಾಲರು ವಿವಾದಾತ್ಮಕ ಸಿಎಎ, ಎನ್ಆರ್ಸಿ ವಿಚಾರ ಪ್ರಸ್ತಾಪಿಸಿದರೆ ಭಾಷಣಕ್ಕೆ ಅಡ್ಡಿಪಡಿಸಲು ಅಣಿಗೊಂಡಿದ್ದ ವಿಪಕ್ಷಗಳಿಗೆ ಆ ಸಂದರ್ಭ ಬರಲಿಲ್ಲ. ವಜುಭಾಯಿ ವಾಲ ಅವರು ತಮ್ಮ ಭಾಷಣದಲ್ಲಿ ಸಿಎಎ, ಎನ್ಅರ್ಸಿ ವಿಚಾರಗಳನ್ನು ಪ್ರಸ್ತಾಪಿಸಲಿಲ್ಲ. ರಾಜ್ಯ ಸರ್ಕಾರದ ಅಭಿವೃದ್ಧಿ ಬಗ್ಗೆಯಷ್ಟೇ ರಾಜ್ಯಪಾಲರ ಭಾಷಣ ಸೀಮಿತವಾಗಿತ್ತು.
ರಾಜ್ಯಪಾಲರು ಸಿಎಎ ವಿಚಾರವನ್ನು ಪ್ರಸ್ತಾಪಿಸಿದರೆ ಅವರ ಭಾಷಣಕ್ಕೆ ಅಡ್ಡಿಪಡಿಸಲು ಮತ್ತು ಧರಣಿ ಕೂರಲು ಕಾಂಗ್ರೆಸ್ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಭಾಷಣದಲ್ಲಿ ಈ ವಿಚಾರವನ್ನು ಕೈಬಿಡಲಾಯಿತೇ ಎಂಬ ಅನುಮಾನವಿದೆ.
ಇನ್ನು, ರಾಜ್ಯಪಾಲ ವಜುಭಾಯಿ ವಾಲ ಈ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸದನದಲ್ಲಿ ರಚನಾತ್ಮಕ ಚರ್ಚೆಯಾಗಲಿ ಎಂದು ಕರೆ ನೀಡಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಭಾರೀ ನೆರೆಯಿಂದಾಗಿ ಅಪಾರ ಹಾನಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ನೆರವು ನೀಡಲಾಗಿದೆ. ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ ಕೃಷಿ ನೆರವು ನೀಡಲಾಗಿದೆ. ಎನ್ಡಿಆರ್ಎಫ್ ನಿಯಮ ಮೀರಿ ನೆರೆ ಸಂತ್ರಸ್ತರ ಸಹಾಯಕ್ಕೆ ರಾಜ್ಯ ಸರ್ಕಾರ ನಿಂತಿದೆ ಎಂದು ರಾಜ್ಯಪಾಲರು ತಿಳಿಸಿದರು.
ಆರು ಲಕ್ಷಕ್ಕೂ ಹೆಚ್ಚು ರೈತರಿಗೆ ಸಬ್ಸಿಡಿ; ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ; ಸಹಕಾರಿ ಬ್ಯಾಂಕ್ಗಳಲ್ಲಿ ರೈತರ ಸಾಲ ಮನ್ನಾ, ಕೃಷಿ ಸಾಲ ಮನ್ನಾ, ಮನ್ರೇಗಾ (MNREGA) ಯೋಜನೆಯಡಿ 100 ದಿನದಿಂದ 150 ದಿನಕ್ಕೆ ವಿಸ್ತರಣೆ; ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ ಹೆಚ್ಚಳ; ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 4,000 ರೂ ಧನಸಹಾಯ ನೀಡುತ್ತಿರುವುದನ್ನು ರಾಜ್ಯಪಾಲರು ಪ್ರಸ್ತಾಪಿಸಿದರು.
ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆಯಲ್ಲಿ 5ನೇ ಸ್ಥಾನದಲ್ಲಿದೆ ಎಂದು ಹೇಳಿದ ರಾಜ್ಯಪಾಲರು, 12,000 ಎಕರೆ ಪ್ರದೇಶಕ್ಕೆ ನೀರಾವರಿ ಯೋಜನೆ, ಅಂತರ್ಜಲ ಹೆಚ್ಚಿಸಲು ಕೆರೆಗಳ ಅಭಿವೃದ್ಧಿ, ಬರಪೀಡಿ 100 ತಾಲೂಕುಗಳಲ್ಲಿ ಜಲಸಂರಕ್ಷಣೆ ಇತ್ಯಾದಿ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಕನ್ನಡವಿಲ್ಲವೆಂದು ವಿರೋಧ:
ರಾಜ್ಯಪಾಲರ ಭಾಷಣ ಪುಸ್ತಕ ಕೇವಲ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮುದ್ರಿಸಿದ್ದಕ್ಕೆ ವಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡದಲ್ಲಿ ಭಾಷಣ ಮಾಡಿ ಎಂದು ಜೆಡಿಎಸ್ ಶಾಸಕ ಅನ್ನದಾನಿ ಎದ್ದು ನಿಂತು ವಿರೋಧಿಸಿದರು.