ಹೊಸಪೇಟೆ: ಬಳ್ಳರಿ ಜಿಲ್ಲೆಯ ಹೊಸಪೇಟೆಯಲ್ಲಿ ಸೋಮವಾರ ಸಂಜೆ ನಡೆದಿದ್ದ ಐಷಾರಾಮಿ ಕಾರು ಅಪಘಾತ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ಸಚಿವರೊಬ್ಬರ ಪುತ್ರನ ಹೆಸರು ಕೇಳಿಬರುತ್ತಿದೆ. ಫೆಬ್ರವರಿ 10 ರಂದು ಸಂಜೆ ಐದು ಗಂಟೆಗೆ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ನಡೆದಿದ್ದು ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.
ಹಂಪಿಯಿಂದ ಬೆಂಗಳೂರಿಗೆ ಬರುತ್ತಿದ್ದ (ಕೆ.ಎ 5 ಎಂಡಬ್ಲೂ 0357) ನೊಂದಣಿಯ ಕಾರು ವೇಗವಾಗಿ ಬಂದು ರಸ್ತೆ ಬದಿಯ ಚಹಾದಂಗಡಿಯಲ್ಲಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕ(18) ಎಂಬುವವರಿಗೆ ಡಿಕ್ಕಿ ಹೊಡೆದಿತ್ತು.
ಪರಿಣಾಮ ರವಿ ನಾಯ್ಕ್ ಸ್ಥಳದಲ್ಲಿ ಮೃತಪಟ್ಟರೆ ಕಾರಿನಲ್ಲಿದ್ದ ಸಚಿನ್ (27) ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ಕುರಿತಾಗಿ ಹೊಸಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ ?
ಹೊಸಪೇಟೆ ಅಪಘಾತ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಹುಲ್ ಎಂಬಾತ ಕಾರು ಚಲಾಯಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ರವಿ ನಾಯ್ಕ್ಗೆ ಡಿಕ್ಕಿ ಹೊಡೆದು ಘಟನೆ ನಡೆದಿದೆ. ಅಪಘಾತದಲ್ಲಿ ರಾಕೇಶ್, ಶಿವಕುಮಾರ್ ಹಾಗೂ ವರುಣ್ಗೂ ಗಾಯವಾಗಿದೆ. ಘಟನೆಗೆ ಕಾರಣವಾದ ಕಾರು ಚಾಲಕ ರಾಹುಲ್ ವಿರುದ್ಧ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.