ಬೀಜಿಂಗ್, ಫೆ.13- ವಿಶ್ಯಾದ್ಯಂತ ತೀವ್ರ ಆತಂಕ ಸೃಷ್ಟಿಸಿ ಚೀನಾವನ್ನು ಅಲ್ಲೋಲಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಾಣು(ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯದಲ್ಲಿ ಒಂದೇ ದಿನ 242 ಜನರನ್ನು ಆಪೋಶನ ತೆಗೆದುಕೊಂಡಿದೆ.
ಕಿಲ್ಲರ್ ಕೊರೋನಾ ದಾಳಿಗೆ ಸತ್ತವರ ಸಂಖ್ಯೆ 1,500ರ ಸನಿಹದಲ್ಲಿದೆ. ಅಲ್ಲದೆ, ಹೊಸದಾಗಿ ಮತ್ತೆಸುಮಾರು 15,000 ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಡೆಡ್ಲಿ ಕೊರೋನಾ ವೈರಾಣುವಿನ ಮೃತ್ಯುಕೋಟೆಯ ಕೇಂದ್ರ ಬಿಂದುವಾದ ಹುಬೇ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಈ ಮಾರಕ ಸೋಂಕಿಗೆ ಇನ್ನೂ 242 ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 1,500 ತಲುಪುವ ಹಂತದಲ್ಲಿದೆ.
ಅಲ್ಲದೆ, ಸುಮಾರು 15,000 ಚೀನಿಯರಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಈ ಪಿಡುಗೆಗೆ ಒಳಗಾದವರ ಸಂಖ್ಯೆ 55,000ಕ್ಕೂ ಮಿಗಿಲಾಗಿದೆ.
ಕೊರೋನಾ ವೈರಾಣು ನಿಗ್ರಹಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ದೇಶಗಳ ಬೆಂಬಲದೊಂದಿಗೆ ಚೀನಾ ತೀವ್ರ ಹೋರಾಟ ಮುಂದುವರಿಸಿದ್ದರೂ, ಕೊರೋನಾ ಕ್ರೌರ್ಯಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.
ಹುಬೇ ಪ್ರಾಂತ್ಯ ಸಾವಿನ ಮನೆಯಾಗಿದ್ದು, ಅಲ್ಲಿ ಪ್ರತಿದಿನ ಸರಾಸರಿ 100 ಮಂದಿ ಸಾವಿಗೀಡಾಗುತ್ತಿದ್ದರು. ಆದರೆ, ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 242 ಜನರು ಮೃತಪಟ್ಟಿರುವುದು ಹೊಸ ದಾಖಲೆಯಾಗಿದ್ದು, ಮತ್ತಷ್ಟು ಭಯ-ಭೀತಿಯ ವಾತಾವರಣ ಸೃಷ್ಟಿಸಿದೆ.