ರಾಯಚೂರು: ಮಸ್ಕಿ ತಾಲೂಕನ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲಿ ಹುಚ್ಚು ತೋಳವೊಂದು ದಾಳಿ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ. ಇದರಲ್ಲಿ ಇಬ್ಬರ ಪರಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಹಿರ್ದೆಸೆಗೆ ತೆರಳಿದ್ದವರ ಮೇಲೆ ಮೊದಲು ದಾಳಿ ನಡೆಸಿದ ತೋಳ, ಬಳಿಕ ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಎಗರಿ ದಾಳಿ ಮಾಡಿದೆ. ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿ 9 ಮಂದಿ ತೋಳದ ದಾಳಿಗೆ ತುತ್ತಾಗಿದ್ದಾರೆ. ಇರಕಲ್ ಗ್ರಾಮಕ್ಕೆ ನುಗ್ಗಿದ ತೋಳ ಅಲ್ಲಿ ಮೂವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಗಾಯಗೊಂಡ 12 ಜನರನ್ನ ಮಸ್ಕಿ ಹಾಗೂ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ 5 ಗಂಟೆ ಸಮಯಕ್ಕೆ ತೋಳ ದಾಳಿ ಶುರು ಮಾಡಿ ಕೊನೆಗೆ ಇರಕಲ್ ಗ್ರಾಮದಲ್ಲಿ ಸಾವನ್ನಪ್ಪಿದೆ. ಇಷ್ಟೆಲ್ಲಾ ಘಟನೆ ನಡೆದಿದ್ದರೂ ಗ್ರಾಮಸ್ಥರ ಮಾಹಿತಿಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.